ಪ್ರಮುಖ ಸುದ್ದಿಮೈಸೂರು

ಸುತ್ತೂರು ಶಾಖಾ ಮಠಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭೇಟಿ

ಮೈಸೂರು,ಜೂ.24:- ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾಮಠಕ್ಕೆ ಇಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದು ಭೇಟಿ ನೀಡಿದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರನ್ನು ಭೇಟಿ ಮಾಡಿದ ಅವರು ಶ್ರೀಗಳ ಜೊತೆ ಉಭಯಕುಶಲೋಪರಿ ನಡೆಸಿದರು.

ಮೈಸೂರಿಗೆ ಡಾ.ಜಿ.ಪರಮೇಶ್ವರ್ ಅವರು ಆಗಮಿಸುತ್ತಿರುವಂತೆಯೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅವರಿಗೆ ಗುಲಾಬಿ ಹೂವಿನ ಬೃಹತ್ ಹಾರ ಹಾಕುವ ಮೂಲಕ ಸ್ವಾಗತ ಕೋರಿದರು.

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ದೇಶಾದ್ಯಂತ ನಡೆಯುತ್ತಿರುವ ಕೋವಿಡ್ ಲಸಿಕಾಭಿಯಾನವನ್ನು ಬಿಜೆಪಿ ತನ್ನ ಪಕ್ಷದ ಕಾರ್ಯಕ್ರಮವೆಂಬಂತೆ ಬಿಂಬಿಸಲು ಮುಂದಾಗಿದೆ ಎಂದು ಟೀಕಿಸಿದರು.

ಲಸಿಕಾಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳುವ ಕೆಲಸ ಬಹಳ ಕಡೆ ನಡೆಯುತ್ತಿದೆ. ಬಿಜೆಪಿ ಕಾರ್ಯಕರ್ತರು ತಮ್ಮದೇ ಫಾರ್ಮಾಸ್ಯೂಟಿಕಲ್ ಕಂಪನಿಗಳಲ್ಲಿ ಲಸಿಕೆ ತಯಾರಿಸಿ ಹಂಚುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸರ್ಕಾರದ ಯೋಜನೆಯನ್ನು ತಮ್ಮದೆಂದು ಬಿಂಬಿಸುತ್ತಿದ್ದಾರೆಮದು ದೂರಿದರು. ಕೋವಿಡ್ ನಿರ್ವಹಣೆಯಲ್ಲಿ ರಾಜಕೀಯ ಮಾಡಬಾರದು. ಈ ರೋಗವನ್ನು ಎಲ್ಲರೂ ಸೇರಿ ತಡೆಗಟ್ಟಬೇಕು. ಕೇವಲ ಬಿಜೆಪಿ, ಕಾಂಗ್ರೆಸ್ ನಿಂದ ತಡಟೆಗಟ್ಟಲು ಸಾಧ್ಯವಿಲ್ಲ. ಪಕ್ಷದ ಚಿಹ್ನೆ, ಬ್ಯಾನರ್ ಇಟ್ಟುಕೊಂಡು ಲಸಿಕೆ ವಿತರಣೆ ಮಾಡುವುದು ಬೇಡ. ಪಕ್ಷದ ವತಿಯಿಂದ ಮಾಡುವುದು ಬೇಡ ಎನ್ನಲ್ಲ, ಆದರೆ ಸರ್ಕಾರದ ಕಾರ್ಯಕ್ರಮದ ದುರ್ಬಳಕೆ ಸಲ್ಲದು ಎಂದರು.  ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳೆರಡೂ ವಿಫಲವಾಗಿದೆ.  ಯಾವುದೇ ರೀತಿಯ ಸ್ಪಷ್ಟ ಯೋಜನೆ ರೂಪಿಸಲು ಇಂದಿಗೂ ಆಗಿಲ್ಲ. ಭವಿಷ್ಯದಲ್ಲಿ ಏನಾಗಬಹುದೆಂಬುದನ್ನು ತಜ್ಞರ ಜೊತೆ ಚರ್ಚಿಸುವ ಕೆಲಸವನ್ನು ಎರಡೂ ಸರ್ಕಾರಗಳೂ ಮಾಡಿಲ್ಲವೆಂದು ದೂರಿದರು.

ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: