ಪ್ರಮುಖ ಸುದ್ದಿವಿದೇಶ

ಮೆಕಾಫೆ ಅಂಟಿವೈರಸ್‌ ಸಾಫ್ಟ್‌ವೇರ್‌ನ ಸಂಶೋಧಕ ಜಾನ್‌ ಮೆಕಾಫೆ ಜೈಲಿನಲ್ಲಿ ಶವವಾಗಿ ಪತ್ತೆ

ಮ್ಯಾಡ್ರಿಡ್,(ಸ್ಪೇನ್),ಜೂ.24-ಖ್ಯಾತ ಕಂಪ್ಯೂಟರ್ ಆಯಂಟಿ ವೈರಸ್ ತಯಾರಿಕಾ ಸಂಸ್ಥೆ ಮೆಕಾಫೆ ಅಂಟಿವೈರಸ್‌ ಸಾಫ್ಟ್‌ವೇರ್‌ನ ಸಂಶೋಧಕ ಜಾನ್‌ ಮೆಕಾಫೆ ಅವರು ಬಾರ್ಸಿಲೋನಾ ಸಮೀಪದ ಜೈಲಿನ ಕೋಣೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಟ್ಯಾಕ್ಸ್ ಸಂಬಂಧಿ ಕ್ರಿಮಿನಲ್ ಆರೋಪಗಳ ಮೇರೆಗೆ ವಿಚಾರಣಾಧೀನ ಕೈದಿಯಾಗಿದ್ದ 75 ವರ್ಷದ ಜಾನ್ ಮೆಕಾಫೆ ಜೈಲಿನಲ್ಲಿನ ತಮ್ಮ ಕೊಠಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಕ್ಕೆ ಗಡಿಪಾರು ಮಾಡಲು ಸ್ಪೇನ್‌ನ ನ್ಯಾಯಾಲಯವೊಂದು ಸಮ್ಮತಿ ಸೂಚಿಸಿದ ಗಂಟೆಗಳೊಳಗೆ ಈ ವಿದ್ಯಮಾನ ಬೆಳಕಿಗೆ ಬಂದಿದೆ. ಮೆಕಾಫೆ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.

ಈಶಾನ್ಯ ಸ್ಪ್ಯಾನಿಷ್ ನಗರದ ಸಮೀಪವಿರುವ ಬ್ರಿಯಾನ್ಸ್ 2 ಸೆರೆಮನೆಯ ಭದ್ರತಾ ಸಿಬ್ಬಂದಿ ಜಾನ್‌ ಅವರಿಗೆ ಚಿಕಿತ್ಸೆ ಕೊಡಿಸಿ, ಅವರನ್ನು ಬದುಕಿಸಿಕೊಳ್ಳಳು ಪ್ರಯತ್ನಿಸಿದರು. ಆದರೆ ಅಂತಿಮವಾಗಿ ಜೈಲಿನ ವೈದ್ಯಕೀಯ ತಂಡವು ಜಾನ್‌ ಮೃತಪಟ್ಟಿರುವುದನ್ನು ಖಚಿತಪಡಿಸಿತು ಎಂದು ಪ್ರಾದೇಶಿಕ ಕ್ಯಾಟಲಾನ್ ಸರ್ಕಾರದ ಹೇಳಿಕೆ ತಿಳಿಸಿದೆ.

ಸ್ಪೇನ್ ನ್ಯಾಷನಲ್‌ ಕೋರ್ಟ್‌ ಸೋಮವಾರ ನಡೆಸಿದ ವಿಚಾರಣೆಯಲ್ಲಿ, ಮೆಕಾಫೆ ಪರ ವಕೀಲರು, ‘ತಮ್ಮ ಕಕ್ಷಿದಾರ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳೂ ರಾಜಕೀಯ ಪ್ರೇರಿತವಾಗಿವೆ. ಅಮೆರಿಕಕ್ಕೆ ಅವರು ಹಿಂದಿರುಗಿದರೆ ಮುಂದಿನ ಜೀವನವನ್ನು ಅವರು ಜೈಲಿನಲ್ಲೇ ಕಳೆಯಲಿದ್ದಾರೆ’ ಎಂದು ವಾದಿಸಿದ್ದರು. ಹೀಗಾಗಿ ನ್ಯಾಯಾಲಯವು ಮೆಕಾಫೆ ಅವರ ಗಡಿಪಾರಿಗೆ ಸಮ್ಮತಿ ಸೂಚಿಸಿ ತೀರ್ಪು ನೀಡಿತ್ತು.

ನ್ಯಾಯಾಲಯದ ತೀರ್ಪನ್ನು ಬುಧವಾರ ಸಾರ್ವಜನಿಕವಾಗಿ ಪ್ರಕಟಿಸಲಾಗಿದ್ದು, ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಮೆಕಾಫೆ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಲು ಸ್ಪೇನ್ ಸರ್ಕಾರದ ಸಚಿವ ಸಂಪುಟ ಅನುಮೋದನೆ ಪಡೆಯಬೇಕಾಗಿತ್ತು.

42 ಲಕ್ಷ ಡಾಲರ್ ತೆರಿಗೆ ಬಾಕಿ: ಮೆಕಾಫೆ ಅವರು ಅಮೆರಿಕ ಸರ್ಕಾರಕ್‌ಎಕ 2014-18ರ ಅವಧಿಯಲ್ಲಿ 42.14 ಲಕ್ಷ ಡಾಲರ್‌ ತೆರಿಗೆ ಪಾವತಿಸುವುದು ಬಾಕಿ ಉಳಿಸಿಕೊಂಡಿದ್ದರು. ಆದರೆ ಇದಕ್ಕೆ ಒಪ್ಪದ ಸ್ಪೇನ್‌ ನ್ಯಾಯಾಲಯ, 2016ರಿಂದ 2018ರವೆರಿಗೆ ತೆರಿಗೆ ವಂಚನೆಯ ಪ್ರಕರಣವನ್ನು ಮಾನ್ಯ ಮಾಡಿ ಮೆಕಾಫೆ ಗಡಿಪಾರಿಗೆ ಒಪ್ಪಿಗೆ ಸೂಚಿಸಿತ್ತು. ಕಳೆದ ಅಕ್ಟೋಬರ್‌ನಲ್ಲಿ ಬಾರ್ಸಿಲೋನಾ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿತ್ತು.

ಇಂಗ್ಲೆಂಡ್‌ನ ಗ್ಲೋಸೆಸ್ಟರ್‌ಶೈರ್‌ನಲ್ಲಿ 1945ರಲ್ಲಿ ಜನಿಸಿದ್ದ ಮೆಕಾಫೆ 1987ರಲ್ಲಿ ಮೆಕಾಫೆ ಅಸೋಸಿಯೇಟ್ಸ್‌ ಆರಂಭಿಸಿದ್ದರು. ಆಯಂಟಿ ವೈರಸ್‌ ಕ್ಷೇತ್ರದಲ್ಲಿ ಹೆಸರು ಗಳಿಸಿದ ಬಳಿಕ 1990ರ ದಶಕದಲ್ಲಿ ಕಂಪನಿಯಲ್ಲಿನ ತಮ್ಮ ಪಾಲನ್ನು ಮಾರಾಟ ಮಾಡಿದ ಬಳಿಕ ವಿಲಕ್ಷಣವಾಗಿ ಬದುಕು ಸಾಗಿಸಿದ್ದರು. ಎರಡು ಬಾರಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೂ ಸ್ಪರ್ಧಿಸಲು ಮುಂದಾಗಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: