ದೇಶಪ್ರಮುಖ ಸುದ್ದಿ

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಹೈಕೋರ್ಟ್ ನಲ್ಲಿ 11 ಪ್ರಕರಣ ದಾಖಲು

ವಿಜಯವಾಡ,ಜೂ.24-ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಿರುದ್ಧ ಹೈಕೋರ್ಟ್ ನಲ್ಲಿ 11 ಪ್ರಕರಣಗಳು ದಾಖಲಾಗಿವೆ. ಎಲ್ಲ ಪ್ರಕರಣಗಳನ್ನು ನ್ಯಾಯಾಲಯವೇ ಖುದ್ದಾಗಿ (ಸುವೊ ಮೋಟೋ) ದಾಖಲು ಮಾಡಿಕೊಂಡಿದೆ.

ರೆಡ್ಡಿ ಅವರು ವಿರೋಧ ಪಕ್ಷದಲ್ಲಿದ್ದ ವೇಳೆ ನ್ಯಾಯಾಲಯದ ಬಗ್ಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಈ ಮೊಕದ್ದಮೆಗಳು ದಾಖಲಾಗಿವೆ. ಹೈಕೋರ್ಟ್ ಆಡಳಿತಾತ್ಮಕ ಸಮಿತಿ ಶಿಫಾರಸಿನಂತೆ ಈ ಕೇಸ್‌ ದಾಖಲು ಮಾಡಿಕೊಳ್ಳಲಾಗಿದ್ದು, ನ್ಯಾಯಾಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ತೀರ್ಮಾನ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

2016 ರಲ್ಲಿ ಜಗನ್ ಮೋಹನ್ ರೆಡ್ಡಿ ವಿರೋಧ ಪಕ್ಷದಲ್ಲಿದ್ದರು. ಆಗ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದರು. ನಾಯ್ಡು ವಿರುದ್ಧ ರೆಡ್ಡಿಯವರು ಅಮರಾವತಿ ಭೂಮಿ ಅಕ್ರಮದ ಆರೋಪ ಮಾಡಿದ್ದರು. ಅಮರಾವತಿ ಎಂಬ ನೂತನ ರಾಜಧಾನಿ ನಿರ್ಮಾಣಕ್ಕೆ ಅಪಾರ ಪ್ರಮಾಣದ ಭೂಮಿ ಸ್ವಾಧೀನಪಡಿಸಿಕೊಂಡಿದ್ದಲ್ಲಿ ಅಕ್ರಮ ಆಗಿರುವುದಾಗಿ ಅವರು ಆರೋಪಿಸಿದ್ದರು. ಚಂದ್ರಬಾಬು ಅವಧಿಯ ಐದು ವರ್ಷಗಳ ಆಡಳಿತದಲ್ಲಿ ಭ್ರಷ್ಟಾಚಾರ ಎಸಗಿದ್ದು, ಈ ಹಗರಣದ ಕುರಿತು ವಿಚಾರಣೆ ನಡೆಸುವಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರೆಡ್ಡಿ ಬಹಿರಂಗ ಹೇಳಿಕೆ ನೀಡಿದ್ದರು.

ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಆರೋಪ ಮಾಡಿ ಮುಖ್ಯನ್ಯಾಯಮೂರ್ತಿಗೆ ಅವರು ಪತ್ರ ಬರೆದಿದ್ದರು. ಚಂದ್ರಬಾಬು ನಾಯ್ಡುಗೆ ಈ ಜಡ್ಜ್‌ ಹತ್ತಿರದವರಾಗಿದ್ದು, ಸ್ವತಃ ನ್ಯಾಯಮೂರ್ತಿಗಳ ಕುಟುಂಬದವರೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಜಗನ್‌ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಇದೀಗ 11 ಕೇಸ್‌ಗಳು ದಾಖಲಾಗಿವೆ. ಇದರ ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: