ಕರ್ನಾಟಕಪ್ರಮುಖ ಸುದ್ದಿ

ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಕಟ್ಟುನಿಟ್ಟಿನಿಂದ ಜಾರಿ  : ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ರಾಜ್ಯ(ಶಿವಮೊಗ್ಗ), ಜೂ. 26:- ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 5ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಅವಶ್ಯಕ ಮತ್ತು ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ದಿನದ 24ಗಂಟೆ ಕಾರ್ಯ ನಿರ್ವಹಿಸಬೇಕಾದ, ತುರ್ತು ಹಾಗೂ ಅವಶ್ಯಕ ಸೇವೆಗಳನ್ನು ಒದಗಿಸುವ ಎಲ್ಲಾ ಕೈಗಾರಿಕೆಗಳು, ಕಂಪೆನಿಗಳು ಮತ್ತು ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಅಂತಹ ಸಂಸ್ಥೆಗಳು ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಒದಗಿಸಿರಬೇಕು. ಟೆಲಿಕಾಂ ಮತ್ತು ಇಂಟರ್‍ನೆಟ್ ಸೇವೆ ಒದಗಿಸುವ ಸಂಸ್ಥೆಗಳ ಸಿಬ್ಬಂದಿಗಳ ವಾಹನ ಸಂಚಾರಕ್ಕೆ ಅವಕಾಶವಿದೆ.

ಆಸ್ಪತ್ರೆಗೆ ತೆರಳಬೇಕಾದ ರೋಗಿಗಳು, ಕೋವಿಡ್ ಲಸಿಕೆ ಪಡೆಯಲು ತೆರಳುವವರ ಸಂಚಾರಕ್ಕೆ ಅನುಮತಿಯಿದೆ. ದಿನಸಿ, ತರಕಾರಿ, ಹಾಲು ಅವಶ್ಯಕ ವಸ್ತುಗಳ ಮಾರಾಟ ಮಳಿಗೆಗಳಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅವಕಾಶವಿದೆ. ತಳ್ಳುಗಾಡಿ ಮಾರಾಟಗಾರರು ಸಹ ಈ ಅವಧಿಯಲ್ಲಿ ವ್ಯಾಪಾರ ಮಾಡಬಹುದು. ಮದ್ಯ ಮಾರಾಟ ಅಂಗಡಿಗಳಿಂದ ಪಾರ್ಸೆಲ್ ಮಾತ್ರ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಕೊಂಡೊಯ್ಯಬಹುದು. ಎಲ್ಲಾ ರೀತಿಯ ಸಾಮಾಗ್ರಿಗಳ ಹೋಂ ಡೆಲಿವರಿಗೆ ದಿನವಿಡೀ ಅವಕಾಶವಿದೆ. ರೆಸ್ಟೋರೆಂಟ್‍ಗಳಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶವಿದೆ.

ಈಗಾಗಲೇ ನಿಗದಿಯಾಗಿರುವ ವಿವಾಹ ಕಾರ್ಯಕ್ರಮವನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ, 40ಮಂದಿಗೆ ಮೀರದಂತೆ ಮನೆಯಲ್ಲಿ ನೆರವೇರಿಸಬಹುದು. ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಗರಿಷ್ಟ 5ಮಂದಿಗೆ ಸೀಮಿತವಾಗಿ ಅಂತ್ಯಸಂಸ್ಕಾರ ನಡೆಸಲು ಅನುಮತಿ ನೀಡಲಾಗಿದೆ. ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: