ದೇಶಪ್ರಮುಖ ಸುದ್ದಿ

ಹಳಿ ತಪ್ಪಿದ ರಾಜಧಾನಿ ಎಕ್ಸ್ ಪ್ರೆಸ್ ರೈಲು: ಪ್ರಯಾಣಿಕರು ಸುರಕ್ಷಿತ

ಮುಂಬೈ,ಜೂ.26- ರಾಜಧಾನಿ ಎಕ್ಸ್ ಪ್ರೆಸ್ ರೈಲು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಸುರಂಗದೊಳಗೆ ಹಳಿ ತಪ್ಪಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ರೈಲು ಸಂಖ್ಯೆ 02414 ಗೋವಾದ ಮಡಂಗಾವ್ ಗೆ ಹಸ್ರತ್ ನಿಜಾಮುದ್ದೀನ್ ಕಡೆಯಿಂದ ಬರುತ್ತಿತ್ತು. ಇಂದು ನಸುಕಿನ ಜಾವ 4.15ರ ಸುಮಾರಿಗೆ ಮುಂಬೈಯಿಂದ 325 ಕಿಲೋ ಮೀಟರ್ ದೂರದಲ್ಲಿ ಕರ್ಬುಡೆ ಸುರಂಗದ ಒಳಗೆ ರೈಲಿನ ಹಳಿ ತಪ್ಪಿತು ಎಂದು ಕೊಂಕಣ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.

ದೊಡ್ಡ ಬಂಡೆ ಕಲ್ಲೊಂದು ಹಳಿಯ ಮೇಲೆ ಬಿದ್ದಿದ್ದರಿಂದ ರೈಲು ಹಳಿ ತಪ್ಪಿತು. ರಾಜಧಾನಿ ಸೂಪರ್ ಫಾಸ್ಟ್ ರೈಲು ಚಲಿಸುತ್ತಿರುವಾಗ ಮುಂದಿನ ಚಕ್ರ ಕರ್ಬುಡೆ ಸುರಂಗ ಮಾರ್ಗದಲ್ಲಿ ಹಳಿ ತಪ್ಪಿದೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕರ್ಬುಡೆ ಸುರಂಗ ಮಾರ್ಗದ ಉಕ್ಶಿ ಮತ್ತು ಬೊಕೆ ನಿಲ್ದಾಣಗಳ ಮಧ್ಯೆ ದುರಂತ ಸಂಭವಿಸಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.

ರೈಲ್ವೆ ನಿರ್ವಹಣಾ ವಾಹನ (ಆರ್‌ಎಂವಿ) ಸ್ಥಳಕ್ಕೆ ತಲುಪಿದ್ದು, ಮರು-ರೇಲಿಂಗ್ ಉಪಕರಣಗಳನ್ನು ಹೊಂದಿರುವ ಅಪಘಾತ ಪರಿಹಾರ ವೈದ್ಯಕೀಯ ವ್ಯಾನ್ (ಎಆರ್‌ಎಂವಿ) ಮರುಸ್ಥಾಪನೆ ಕಾರ್ಯಕ್ಕಾಗಿ ರತ್ನಗಿರಿಯಿಂದ ಸ್ಥಳಕ್ಕೆ ಆಗಮಿಸಿತು. ಕೊಂಕಣ ರೈಲ್ವೆ ಅಧಿಕಾರಿಗಳೂ ಸಹ ಮಾರ್ಗವನ್ನು ತೆರವುಗೊಳಿಸಲು ಸ್ಥಳಕ್ಕೆ ಧಾವಿಸಿದರು ಎಂದು ಅವರು ಹೇಳಿದ್ದಾರೆ.

ಕೊಂಕಣ ರೈಲ್ವೆ ಮುಂಬೈ ಬಳಿಯ ರೋಹಾ ಮತ್ತು ಮಂಗಳೂರು ಬಳಿಯ ತೋಕೂರ್ ನಡುವೆ 756 ಕಿ.ಮೀ ಉದ್ದದ ಮಾರ್ಗವನ್ನು ನಿರ್ವಹಿಸುತ್ತದೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಮೂರು ರಾಜ್ಯಗಳಲ್ಲಿ ಹರಡಿರುವ ಈ ಮಾರ್ಗವು ಅನೇಕ ನದಿಗಳು, ಕಮರಿಗಳು ಮತ್ತು ಪರ್ವತಗಳನ್ನು ಹೊಂದಿರುವ ಸವಾಲಿನ ಭೂಪ್ರದೇಶಗಳಲ್ಲಿ ಒಂದಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: