ಮೈಸೂರು

ಮಾನಸಿಕವಾಗಿ ನೊಂದ ಮನಸ್ಸುಗಳಿಗೆ ಶುಶ್ರೂಷೆ ಮಾಡುವುದು ಪುಣ್ಯದ ಕೆಲಸ : ಡಾ.ಭೀಮರಾಜ್ ಹಿರೇಗೌಡ

ಮಾನಸಿಕ ಅಸ್ವಸ್ಥ ನಿರಾಶ್ರಿತರ ಚಿತ್ತಧಾಮ ಕೇಂದ್ರಕ್ಕೆ ದಿನಸಿ ಕಿಟ್ ವಿತರಣೆ

ಮೈಸೂರು, ಜೂ.26:- ನಗರದ ಕುವೆಂಪು ನಗರದಲ್ಲಿರುವ ಸಮರ್ಪಣಾ ಶೈಕ್ಷಣಿಕ ಹಾಗೂ ದಾನದತ್ತಿ ಸಂಸ್ಥೆ ವತಿಯಿಂದ ಇಂದು   ಹೆಚ್.ಡಿ.ಕೋಟೆ ತಾಲೂಕು ಬೊಚ್ಚಿಕಟ್ಟೆ ಗ್ರಾಮದ ಮಾನಸಿಕ ಅಸ್ವಸ್ಥರ ನಿರಾಶ್ರಿತ ಚಿತ್ತಧಾಮ ಕೇಂದ್ರಕ್ಕೆ ಆಹಾರ ಪದಾರ್ಥಗಳು ತರಕಾರಿಯನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಭೀಮರಾಜ್ ಹಿರೇಗೌಡ ಅವರು ಮಾತನಾಡಿ, ಮಾನಸಿಕ ಅಸ್ವಸ್ಥರನ್ನು ನೋಡಿಕೊಳ್ಳುವುದು ತುಂಬಾ ಕಷ್ಟಕರವಾದ ಕೆಲಸ. ಇದನ್ನು ಜವಾಬ್ದಾರಿಯುತವಾಗಿ, ಬಹಳ ತಾಳ್ಮೆಯಿಂದ ನಿರ್ವಹಿಸಬೇಕು. ಪ್ರಾಪಂಚಿಕ ಜ್ಞಾನವಿರದ, ತಿಳುವಳಿಕೆ ಇಲ್ಲದ ಇಂತಹ ಮನಸ್ಸುಗಳಿಗೆ ಮನೋಸ್ಥೈರ್ಯವನ್ನು ನೀಡಿ, ಅವರನ್ನೂ ಕೂಡ ಎಲ್ಲ ಮನುಷ್ಯರಂತೆ ಕಾಣುವಂತಾಗಿ, ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ನಾವೆಲ್ಲರೂ ಜವಾಬ್ದಾರಿಯುತವಾಗಿ ನಿರ್ವಹಿಸಬೇಕಿದೆ. ಮಾನಸಿಕವಾಗಿ ನೊಂದ ಮನಸ್ಸುಗಳಿಗೆ ಶುಶ್ರೂಷೆ ಮಾಡುವುದು ಒಂದು ಪುಣ್ಯದ ಕೆಲಸ. ಇಂತಹ ಕೆಲಸ ಮಾಡುವವರಿಗೆ ಸಮಾಜದ ಉಳ್ಳವರು ಇಲ್ಲದವರಿಗೆ ಉದಾರವಾಗಿ ಸಹಾಯ, ಸಹಕಾರ ನೀಡಿದಾಗ ಅವರನ್ನೂ ಕೂಡ ಗುರುತಿಸಿದಂತಾಗುತ್ತದೆ ಎಂದು ತಿಳಿಸಿದರು.

ಸಮರ್ಪಣಾ ಟ್ರಸ್ಟ್‍ ನ ಖಜಾಂಚಿ ಹಾಗೂ ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಅವರು ಮಾತನಾಡಿ, ಮಾನಸಿಕ ಒತ್ತಡದಿಂದ ಮನುಷ್ಯ ಹೊರಬಂದಾಗ ನೆಮ್ಮದಿಯ ಜೀವನವನ್ನು ನಡೆಸಬಹುದು. ಯಾವುದೋ ಒಂದು ತೊಂದರೆಯಿಂದ ಮಾನಸಿಕವಾಗಿ ಅಸ್ವಸ್ಥಗೊಂಡು, ಹತಾಶ ಭಾವನೆಯಿಂದ ನೊಂದ ಮನಸ್ಸುಗಳನ್ನು ಒಂದು ಕಡೆ ಸೇರಿಸಿ, ಅವರಿಗೆ ಸಾಂತ್ವನ ಮತ್ತು ಆಶ್ರಯವನ್ನು ನೀಡಿ ಆರೋಗ್ಯಕರವಾಗಿ ನೋಡಿಕೊಳ್ಳುತ್ತಿರುವುದು ಶ್ಲಾಘನೀಯವಾದ ವಿಚಾರ. ಮನುಷ್ಯ ಇನ್ನೊಬ್ಬರನ್ನು ಅಣಕಿಸುವುದನ್ನು ಬಿಟ್ಟಾಗಲೇ ನಮ್ಮ ಬದುಕು ನಮಗೆ ಸುಂದರವಾಗಿ ಕಾಣಲು ಸಾಧ್ಯ. ಜೀವನದಲ್ಲಿ ನಿರಂತರವಾಗಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿದಾಗ ಆತ್ಮತೃಪ್ತಿಯನ್ನು ಹೊಂದಬಹುದು ಎಂದರಲ್ಲದೇ, ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ, ಸಮಾಜ ಸೇವೆ ಮಾಡದಿದ್ದರೆ ಆ ಜೀವನ ವ್ಯರ್ಥ, ನಿರರ್ಥಕ. ಆದ್ದರಿಂದ ಮಾನವೀಯ ನೆಲೆಯಲ್ಲಿ ಸಮಾಜದ ಋಣವನ್ನು ಇಂತಹ ಸೇವಾಕಾರ್ಯಗಳ ಮೂಲಕ ತೀರಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಅವರು ತಿಳಿಸಿದರು.

ಐ್ರಸ್ಟ್‍ನ ಗೌರವ ಕಾರ್ಯದರ್ಶಿ ಎಂ.ಎಸ್.ಬಾಲಸುಬ್ರಹ್ಮಣ್ಯ ಅವರು ಮಾತನಾಡಿ, ಮಾನಸಿಕವಾಗಿ ಅಸ್ವಸ್ಥತೆಯಿಂದ ಕೂಡಿರುವವರಿಗೆ ವಿವಿದ ಚಟುವಟಿಕೆಗಳನ್ನು ಸಕ್ರಿಯವಾಗಿ ಹಮ್ಮಿಕೊಂಡು ಅದರ ಮೂಲಕ ಅವರ ಮನಸ್ಸನ್ನು ಪರಿವರ್ತನೆಗೊಳಿಸಬೇಕು. ಸ್ವಸ್ಥ್ಯವಾದ ವಾತಾವರಣದಿಂದ ಅವರು ಬೇಗ ಗುಣಮುಖರಾಗಿ, ಎಲ್ಲರಂತೆ ಬದುಕಲು ಸಾಧ್ಯವಾಗುತ್ತದೆ. ಇದು ನಿಜವಾದ ಸಾರ್ಥಕ ಬದುಕಿನ ಕೆಲಸವಾಗಿ ಉಳಿಯುತ್ತದೆ ಎಂದು ತಿಳಿಸಿದರು. ಚಿತ್ತಧಾಮ ಸಂಸ್ಥೆಯ ಮೇಲ್ವಿಚಾರಕರಾದ ಮಂಜುಳ, ಗ್ರಾಮ ಲೆಕ್ಕಿಗ ದಿವಾಕರ್ ಹಾಗೂ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: