ಮೈಸೂರು

ಅಕ್ಕನಿಗೆ ಕಿರುಕುಳ ನೀಡುತ್ತಿದ್ದ ಬಾವನನ್ನೇ ಕೊಲೆಗೈದ ಬಾಮೈದ

ಮೈಸೂರು,ಜೂ.28:- ಅಕ್ಕನಿಗೆ ಬಾವ ಕಿರುಕುಳ ನೀಡುತ್ತಿದ್ದನೆಂಬ ಕಾರಣಕ್ಕೆ ಬಾಮೈದನೇ ಚಾಕುವಿನಿಂದ ಚುಚ್ಚಿ ಕೊಲೆಗೈದ ಘಟನೆ ವಿಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆಯಾದವನನ್ನು ಮೂಲತಃ ಹೆಚ್.ಡಿ.ಕೋಟೆಯ ಇಜ್ಜಾಲ ಗ್ರಾಮದ  ಹಾಲಿ ಕೂರ್ಗಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿರುವ ಕೆಂಪಶೆಟ್ಟಿ(36) ಎಂದು ಹೇಳಲಾಗಿದ್ದು, ಕೊಲೆಗೈದಾತ  ಕೂರ್ಗಳ್ಳಿ ನಿವಾಸಿ ಕೆಂಡ ಶೆಟ್ಟಿ(26)ಎನ್ನಲಾಗಿದೆ. ಕೆಂಡ ಶೆಟ್ಟಿಯ ಅಕ್ಕನನ್ನು ಕೆಂಪಶೆಟ್ಟಿಗೆ ವಿವಾಹ ಮಾಡಿಕೊಡಲಾಗಿತ್ತು. ಈತ ವಿವಾಹವಾದಂದಿನಿಂದಲೂ  ತನ್ನ ಪತ್ನಿಗೆ ಒಂದಿಲ್ಲೊಂದು ರೀತಿಯಲ್ಲಿ ಕಿರುಕುಳ ನೀಡುತ್ತಲೇ ಇದ್ದು, ಆಕೆ ತವರು ಮನೆಯಲ್ಲಿ ತನಗೆ ಪತಿ ನೀಡುತ್ತಿದ್ದ ಕಿರುಕುಳದ ಕುರಿತು ಹೇಳಿಕೊಳ್ಳುತ್ತಿದ್ದಳು ಎನ್ನಲಾಗಿದೆ. ಅಕ್ಕನ ಸ್ಥಿತಿಯನ್ನು ನೋಡಲಾಗದೇ ಬಾವನ ವಿರುದ್ಧ ರೊಚ್ಚಿಗೆದ್ದ ಬಾಮೈದ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆಗೈದಿದ್ದಾನೆ.

ವಿಜಯ ನಗರ ಪೊಲೀಸ್ ಠಾಣಾ ಇನ್ಸಪೆಕ್ಟರ್ ಬಾಲಕೃಷ್ಣ ಮತ್ತು ಸಬ್ ಇನ್ಸಪೆಕ್ಟರ್ ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆ ನಿನ್ನೆ ತಡರಾತ್ರಿ ನಡೆದಿದ್ದು, ಇಂದು ಬೆಳಿಗ್ಗೆ ಆರೋಪಿಯನ್ನು ಬಂಧಿಸಿ, ನ್ಯಾಯಾಂಗದ ಮುಂದೆ ಹಾಜರುಪಡಿಸಿದ್ದಾರೆ.

ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: