ಕರ್ನಾಟಕಪ್ರಮುಖ ಸುದ್ದಿ

ಚನ್ನಗಿರಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 80 ಲಕ್ಷ ರೂ ವೆಚ್ಚದ ಆಕ್ಸಿಜನ್ ಪ್ಲಾಂಟ್ ಲೋಕಾರ್ಪಣೆ

ರಾಜ್ಯ(ದಾವಣಗೆರೆ),ಜೂ.29:- ಚನ್ನಗಿರಿ ಪಟ್ಟಣದಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕೆಎಸ್‍ಡಿಎಲ್ ನಿಗಮದ ಸಿಎಸ್‍ಆರ್ ನಿಧಿಯಲ್ಲಿ ಮಂಜೂರು ಮಾಡಲಾದ 80 ಲಕ್ಷ ರೂ. ವೆಚ್ಚದ ನೂತನ ಆಕ್ಸಿಜನ್ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹಾಗೂ ಚನ್ನಗಿರಿ ಶಾಸಕರು ಹಾಗೂ ಕೆಎಸ್‍ಡಿಎಲ್ ನಿಗಮದ ಅಧ್ಯಕ್ಷರಾದ ಮಾಡಳ್ ವಿರೂಪಾಕ್ಷಪ್ಪ ವರು ಲೋಕಾರ್ಪಣೆಗೊಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಅವರು, ಸಂಸದರ ಹಾಗೂ ಚನ್ನಗಿರಿ ಶಾಸಕರ ಮುತುರ್ವಜಿಯಿಂದ ತಾಲ್ಲೂಕಿಗೆ ಅಗತ್ಯವಾಗಿ ಬೇಕಾಗಿರುವ ಆಕ್ಸಿಜನ್ ಘಟಕ ಆರಂಭವಾಗಿದ್ದು, ಈ ಘಟಕದ ಸದುಪಯೋಗ ಆಗಬೇಕು, ಕೋವಿಡ್ ಸೋಂಕಿತರಿಗೆ ಮುಂಬರುವ ದಿನಗಳಲ್ಲಿ ಯಾವುದೇ ರೀತಿಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಬಾರದು ಹಾಗೂ ಚಿಕಿತ್ಸೆಯಿಂದ ವಂಚಿತರಾಗಬಾರದೆಂದು ಆಕ್ಸಿಜನ್ ಘಟಕ ಸ್ಥಾಪಿಸಲಾಗಿದ್ದು, ಸೋಂಕಿತರಿಗೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಆಕ್ಸಿಜನ್ ಘಟಕ ಸ್ಥಾಪನೆಗೆ ಎಲ್ಲಾ ರೀತಿಯ ಸಹಕಾರ ನೀಡಿರುವ ಚನ್ನಗಿರಿ ಶಾಸಕರು ಹಾಗೂ ಕರ್ನಾಟಕ ಸೋಪ್ಸ್ ಅಂಡ್ ಡಿಟರ್‍ಜೆಂಟ್ಸ್ ಲಿಮಿಟೆಡ್ (ಕೆಎಸ್‍ಡಿಎಲ್) ನಿಗಮದ ಅಧಿಕಾರಿಗಳಿಗೆ ಅಭಿನಂದಿಸುವುದಾಗಿ ತಿಳಿಸಿದರು.
ಚನ್ನಗಿರಿ ಶಾಸಕರು ಹಾಗೂ ಕೆಎಸ್‍ಡಿಎಲ್ ನಿಗಮದ ಅಧ್ಯಕ್ಷ ಮಾಡಳ್ ವಿರೂಪಾಕ್ಷಪ್ಪ ಮಾತನಾಡಿ, ಕೊರೊನಾ ಎರಡನೇ ಅಲೆ ಆರಂಭಿಕ ಅಲೆಯಲ್ಲಿ ಅಷ್ಟಾಗಿ ಸಮಸ್ಯೆಯಾಗಲಿಲ್ಲ. ಆದರೆ, ಒಂದೇ ತಿಂಗಳ ಅವಧಿಯಲ್ಲಿ ಪರಿಸ್ಥಿತಿ ಉಲ್ಬಣವಾಯಿತು. ಸೋಂಕಿತರು ಆಕ್ಸಿಜನ್ ಕೊರತೆಯಿಂದ ಪರದಾಡುವ ಪರಿಸ್ಥಿತಿ ಕಂಡು ಕೆಎಸ್‍ಡಿಎಲ್ ಸಂಸ್ಥೆ ಸಿಎಸ್‍ಆರ್ ಫಂಡ್‍ನಲ್ಲಿ 80 ಲಕ್ಷ ರೂ. ಅನುದಾನದಲ್ಲಿ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಗೆ ಮುಂದಾಗಿದ್ದು, ಇದೀಗ ಸಾಕಾರಗೊಂಡಿದೆ. ಇದು ಗಂಟೆಗೆ 30 ಸಾವಿರ ಲೀಟರ್ ಆಕ್ಸಿಜನ್ ಹಾಗೂ ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆಎಸ್‍ಡಿಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಹೆಚ್‍ಒ ಡಾ.ನಾಗರಾಜ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್ ಸೇರಿದಂತೆ ಇನ್ನುಳಿದ ತಾಲ್ಲೂಕು ಅಧಿಕಾರಿಗಳು ಇದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: