ಮೈಸೂರು

ಜನರು ನೀಡಿದ ತೀರ್ಪನ್ನು ಒಪ್ಪಿಕೊಳ್ಳುವುದು ಸಜ್ಜನರ ಗುಣ : ಸಿದ್ದರಾಮಯ್ಯ ಹೇಳಿಕೆ

ಉಪ ಚುನಾವಣೆ ಪ್ರಚಾರದ ವೇಳೆ  ನನ್ನನ್ನು ಅಯೋಗ್ಯ ಮುಖ್ಯಮಂತ್ರಿ ಎಂದು ಟೀಕಿಸುವಾಗ ನಿಮ್ಮ ಪಿತ್ತ ಎಲ್ಲಿಗೆ ಏರಿತ್ತು ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ  ಪ್ರಶ್ನಿಸಿದರು.

ಪಕ್ಷದ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಸಲ್ಲಿಸಲು ನಂಜನಗೂಡಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ  ಪಾಲ್ಗೊಂಡು ಮುಖ್ಯಮಂತ್ರಿಗಳು ಮಾತನಾಡಿದರು. ಚುನಾವಣೆಯಲ್ಲಿ ಸೋಲು, ಗೆಲುವು ಸಹಜ. ನಾನೂ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇನೆ. ಸೋತ ಬಳಿಕ ಜನರು ಕೊಟ್ಟ ತೀರ್ಪನ್ನು ಮರ್ಯಾದೆಯಿಂದ ಒಪ್ಪಿಕೊಳ್ಳುವುದು ಸಜ್ಜನರ ಗುಣ. ಬಿಜೆಪಿಯವರು ಇಲ್ಲಿ ಸೋತಿದ್ದಾರೆ. ಆದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರರು ಪ್ರಭುಗಳೇ ಹೊರತು ಚುನಾವಣೆಗೆ ನಿಲ್ಲುವವರು, ಶಾಸಕರು, ಮಂತ್ರಿಗಳಲ್ಲ ಎಂಬ ಸಾಮಾನ್ಯ ಜ್ಞಾನವನ್ನು ರಾಜಕೀಯದಲ್ಲಿ ಅರ್ಥ ಮಾಡಿಕೊಳ್ಳಬೇಕು.ಜನರೇ ನಮ್ಮ ಮಾಲೀಕರು. ಅವರು ಕೊಡುವ ತೀರ್ಪನ್ನು ಒಪ್ಪಬೇಕು. ಅದು ಬಿಟ್ಟು ಚುನಾವಣೆಗೆ ಮುನ್ನ ಒಂದು, ಫಲಿತಾಂಶ ಬಂದ ಬಳಿಕ ಮತ್ತೊಂದು ಮಾತು ಹೇಳುವವರಿಗೆ ಮತದಾರರ ಬಗ್ಗೆ ಗೌರವ ಇರುವುದಿಲ್ಲ‌. ಯಡಿಯೂರಪ್ಪ ಮಾತೆತ್ತಿದರೆ ಮಿಷನ್ 150 ಎನ್ನುತ್ತಿದ್ದರು. ಆ ರೀತಿ ಹೇಳಲು ಶಾಸಕರು ಅವರ ಜೇಬಿನಲ್ಲಿದ್ದಾರೆಯೇ. ಹೀಗೆ ಮಾತನಾಡುವವರು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ ಎಂದರು.

ಬಿಜೆಪಿಯವರಿಗೆ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯೇ ಇಲ್ಲ. ಬಡತನ, ನಿರುದ್ಯೋಗ, ದಲಿತರು, ಹಿಂದುಳಿದವರು, ಮಹಿಳೆಯರ ಬಗ್ಗೆ ಗೌರವ ಇಲ್ಲ. ಈ ನಿಮ್ಮ ಯಡಿಯೂರಪ್ಪ ಸಿಎಂ ಆಗಬೇಕಾದರೆ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಹೇಳುತ್ತಿದ್ದರು. ಆದರೆ ನಂಜನಗೂಡು ಕ್ಷೇತ್ರದ ಮತದಾರರು ಯಡಿಯೂರಪ್ಪ ನಮ್ಮವರಲ್ಲ ಎಂದು ಸಾಬೀತು ಮಾಡಿದ್ದಾರೆ ಅವರಿಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ಮುಖ್ಯಮಂತ್ರಿ ಗಳು ಹೇಳಿದರು.

ಇದು ಸ್ವಾಭಿಮಾನ ಮತ್ತು ದುರಹಂಕಾರದ ನಡುವಣ ಚುನಾವಣೆ. ನನಗೂ ಸಿದ್ದರಾಮಯ್ಯ ಗೂ ನಡೆಯುತ್ತಿರುವ ಯುದ್ಧ ಎಂದು ಬಿಜೆಪಿ ಅಭ್ಯರ್ಥಿ ಹೇಳುತ್ತಿದ್ದರು. ಚುನಾವಣೆಯಲ್ಲಿ ಸೋತರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾದರೆ ಸಿಎಂ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದ್ದರು. ಅವರು ರಾಜಕೀಯದಿಂದ ನಿವೃತ್ತಿ ಆಗಲಿ ಎಂದು ನಾನು ಬಯಸುವುದಿಲ್ಲ. ಆದರೆ ಅವರ ಮಾತುಗಳನ್ನು ನೆನಪು ಮಾಡಿಕೊಡುತ್ತಿದ್ದೇನೆ ಅಷ್ಟೆ. ರಾಜಕೀಯದಲ್ಲಿ ಇರುವವರು ಮತದಾರರನ್ನು ಗುತ್ತಿಗೆಗೆ ಪಡೆದವರಂತೆ ವರ್ತಿಸಬಾರದು.ಮತದಾರರ ಆಶೀರ್ವಾದದಿಂದ ಚುನಾವಣೆ ಗೆಲ್ಲಬಹುದೇ ಹೊರತು ಮಾತಿನಿಂದ ಅಲ್ಲ. ಚುನಾವಣೆಯಲ್ಲಿ ನಾವು ಜಾತಿ, ಧರ್ಮದ ಆಧಾರದ ಮೇಲೆ ಮತ ಕೇಳಲಿಲ್ಲ. ನಮ್ಮ ಕಾರ್ಯಕ್ರಮ, ಸಿದ್ಧಾಂತದ ಆಧಾರದ ಮೇಲೆ ಮತ ಕೇಳಿದೆವು. ಜಾತಿ, ಧರ್ಮಗಳನ್ನು ಸೂಜಿಯಿಂದ ಬಟ್ಟೆ ಹೊಲಿಯುವಂತೆ ಜೋಡಿಸುವವರು ನಾವು‌. ಕತ್ತರಿಯಿಂದ ಕತ್ತರಿಸುವವರಲ್ಲ. ಜನರನ್ನು ಒಗ್ಗೂಡಿಸಬೇಕೇ ಹೊರತು ಒಡೆಯುವ ಕೆಲಸ ಮಾಡಬಾರದು. ನಂಜನಗೂಡು  ವಿಧಾನಸಭೆ ಕ್ಷೇತ್ರದಲ್ಲಿ ಎಲ್ಲ ಜಾತಿ, ಧರ್ಮದ ಜನ ಆಶೀರ್ವಾದ ಮಾಡಿ ಕಳಲೆ ಕೇಶವಮೂರ್ತಿ ಅವರನ್ನು ಗೆಲ್ಲಿಸಿದ್ದಾರೆ. ಇದು ನನಗೆ ಅವರು ಗೆದ್ದಿರುವುದಕ್ಕಿಂತ ಹೆಚ್ಚು ಖುಷಿ ಉಂಟು ಮಾಡಿದೆ.ಚುನಾವಣಾ ಪ್ರಚಾರದ ವೇಳೆ ನನ್ನ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದರು‌. ಏಕವಚನದಲ್ಲಿ ನಿಂದಿಸಿದರು. ಅಯೋಗ್ಯ ಮುಖ್ಯಮಂತ್ರಿ ಎಂದರು. ಆದರೆ ನಾವು ಯಾರನ್ನೂ ಟೀಕೆ ಮಾಡಲಿಲ್ಲ.

ನಾವು ಕೆಲಸ ಮಾಡಿದ್ದೇವೆ. ಮತದ ರೂಪದಲ್ಲಿ ಕೂಲಿ ಕೊಡಿ ಎಂದು ಕೇಳಿಕೊಂಡಿದ್ದೆವು. ಕೂಲಿ ಕೊಟ್ಟಿರುವ ಮತದಾರರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಈ ಚುನಾವಣೆ ಸೆಮಿಫೈನಲ್. ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದರು. ಈಗ ಅವರು ಆ ಮಾತು ಹೇಳುವುದಿಲ್ಲ. ಹಣ, ಹೆಂಡ ಹಂಚಿ ಚುನಾವಣೆ ಗೆದ್ದಿದ್ದಾರೆ ಎಂದು ಹೇಳುತ್ತಿದ್ದಾರೆ.

ಹಣ ಪಡೆದು ಮತ ಹಾಕಿದ್ದಾರೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಮತದಾರರಿಗೆ ಅವಮಾನ ಮಾಡಿದ್ದಾರೆ. ಹಣ ಹಂಚಿ ಚುನಾವಣೆ ಗೆಲ್ಲುವಂತಿದ್ದರೆ ಟಾಟಾ, ಬಿರ್ಲಾ, ಅಂಬಾನಿಗಳು ಎಂದೋ ಗೆಲ್ಲುತ್ತಿದ್ದರು.

ನನ್ನ ವಿರುದ್ಧ ಯಡಿಯೂರಪ್ಪ ಅಧಿಕಾರ ದುರುಪಯೋಗದ ಆರೋಪ ಮಾಡಿದ್ದಾರೆ. ನಾನು ಜನರನ್ನು ನಂಬಿ ರಾಜಕಾರಣ ಮಾಡುವವನು. ಸರ್ಕಾರ ರಚನೆಗೆ 2008ರಲ್ಲಿ ಬಹುಮತದ ಕೊರತೆ ಎದುರಾದಾಗ ಎಂಟು ಶಾಸಕರಿಂದ ರಾಜೀನಾಮೆ ಕೊಡಿಸಿ ಉಪ ಚುನಾವಣೆ ನಡೆಸಿದವರು ಯಾರು ಎಂದು  ಪ್ರಶ್ನಿಸಿದರು.ಜಾತ್ಯತೀತ ಜನತಾದಳದ ವರಿಷ್ಠರಾದ ದೇವೇಗೌಡರು, ಪಕ್ಷದ ಸ್ಥಳೀಯ ಮುಖಂಡರು, ಬೆಂಕಿ ಮಹದೇವು ಅವರ ಪತ್ನಿ ರಾಜಮ್ಮ, ದಲಿತ ಸಂಘಟನೆಗಳ ಪದಾಧಿಕಾರಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳಿಗೆ ಸಿಎಂ ಕೃತಜ್ಞತೆ ಸಲ್ಲಿಸಿದರು.

ಕೆಪಿಸಿಸಿ ಅಧ್ಯಕ್ಷರಾದ ಡಾ. ಜಿ. ಪರಮೇಶ್ವರ, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಎಂ.ಬಿ.ಪಾಟೀಲ್, ಆಂಜನೇಯ, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ತನ್ವೀರ್ ಸೇಠ್, ಮಾಜಿ ಸಚಿವ ಇಬ್ರಾಹಿಂ ಮತ್ತಿತರರು ಭಾಗವಹಿಸಿದ್ದರು.

Leave a Reply

comments

Related Articles

error: