ಕರ್ನಾಟಕಪ್ರಮುಖ ಸುದ್ದಿ

ಜಿಲ್ಲಾಡಳಿತಕ್ಕೆ ರೋಟರಿಯಂತಹ ಸೇವಾ ಸಂಸ್ಥೆಗಳ ನೆರವು ಶ್ಲಾಘನೀಯ; ಜಿಲ್ಲಾಧಿಕಾರಿ

 ರಾಜ್ಯ(ಮಡಿಕೇರಿ) ಜು. 3:-  ಮಡಿಕೇರಿಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಗಳಿಗೆ ತೆರಳುವವರಿಗೆ ಹೊಸ ಆಕರ್ಷಣೆ ಕಾದಿದೆ. ಅದರಲ್ಲಿಯೂ ಯುವಜನಾಂಗಕ್ಕೆ ಆಕರ್ಷಕವಾಗಿರುವ ನಾನೂ ಲಸಿಕೆ ಹಾಕಿಸಿಕೊಂಡಿರುವೆ ಎಂಬ ಸಂದೇಶದ ಫೋಟೋ ತೆಗೆಸಿಕೊಳ್ಳುವ ಕೇಂದ್ರವನ್ನು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೀಡಲಾಗಿದ್ದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಶನಿವಾರ ಉದ್ಘಾಟಿಸಿದರು.
ಮಡಿಕೇರಿಯ ಓಂಕಾರ ಸದನ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಲಸಿಕೆ ಕೇಂದ್ರದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನೀಡಿದ ಆಕರ್ಷಕ ಫೋಟೋ ಕೇಂದ್ರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕೊವೀಡ್ 19 ನ್ನು ಎದುರಿಸಲು ಎಲ್ಲರೂ ಸರ್ವಸನ್ನದ್ದರಾಗಿ ಮುಂದಾಗಬೇಕು. ಲಸಿಕೆ ಹಾಕಿಸಿಕೊಂಡರೂ ಮಾಸ್ಕ್  ನ್ನು ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಬೇಕು ಎಂದರು.
ಆರೋಗ್ಯ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಲಸಿಕೆ ವಿತರಣೆ ನಡೆಯುತ್ತಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ನೆರವಿಗೆ ರೋಟರಿಯಂತಹ ಸಾಮಾಜಿಕ ಸೇವಾ ಸಂಸ್ಥೆಗಳು ಮುಂದಾಗಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿಯಂತಹ ಸಾಮಾಜಿಕ ಸೇವಾ ಸಂಘಟನೆಗಳು ಜಿಲ್ಲೆಯಲ್ಲಿ ಹಲವಾರು ಯೋಜನೆಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಯೋಜನೆಗಳಿಗೆ ಮುಂದಾಗಬೇಕೆಂದೂ ಜಿಲ್ಲಾಧಿಕಾರಿ ಕರೆ ನೀಡಿದರು.
ಈಗಾಗಲೇ ಕೋವಿಡ್ ಎದುರಿಸಲು ಜಿಲ್ಲಾಡಳಿತ ಕೈಗೊಂಡಿರುವ ಹಲವಾರು ಕಾರ್ಯಗಳಿಗೆ ಜಿಲ್ಲೆಯ ಅನೇಕ ಸಂಘಟನೆಗಳು ನೆರವು ನೀಡುತ್ತಲೇ ಇರುವುದು ಜಿಲ್ಲಾಡಳಿತಕ್ಕೆ ಬೆಂಬಲ ನೀಡಿದಂತಾಗಿದೆ ಎಂದು ಚಾರುಲತಾ ಸೋಮಲ್ ಶ್ಲಾಘಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಮಾತನಾಡಿ, ಲಸಿಕೆ ಹಾಕಿಸಿಕೊಂಡ ಜನರು ವಿಶೇಷವಾಗಿ ಯುವಪೀಳಿಗೆ ಲಸಿಕೆ ಹಾಕಿಸಿದ ಬಳಿಕ ಕೇಂದ್ರದಲ್ಲಿನ ಫೋಟೋ ಪಾಯಿಂಟ್ನಲ್ಲಿ ನಿಂತು ನಾನೂ ಲಸಿಕೆ ಹಾಕಿಸಿಕೊಂಡಿದ್ದೇನೆ ಎಂಬ ಬರಹದ ಜತೆ ಫೋಟೋ ತೆಗೆಸಿಕೊಳ್ಳಬಹುದಾಗಿದೆ. ಇದು ಯುವಪೀಳಿಗೆಯಲ್ಲಿ ಜನಪ್ರಿಯವಾಗುತ್ತದೆ. ಲಸಿಕೆ ಹಾಕಿಸಿಕೊಳ್ಳಲು ಯುವಜನಾಂಗ ಮತ್ತಷ್ಟು ಉತ್ಸಾಹದಿಂದ ಮುಂದೆ ಬರುವ ಭರವಸೆ ಇದೆ ಎಂದರು.
ಕೋವಿಡ್ ನಂಥ ಸಾಂಕ್ರಾಮಿಕ ರೋಗ ಎದುರಿಸುವ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಲು ರೋಟರಿ ಮಿಸ್ಟಿ ಹಿಲ್ಸ್ ನಿಂದ ಮುಂದಿನ ದಿನಗಳಲ್ಲಿ ನಾನಾ ಕಾರ್ಯ ಯೋಜನೆ ಆಯೋಜಿಸಿರುವುದಾಗಿಯೂ ಅನಿತಾ ಹೇಳಿದರು.
ಈ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಆರ್.ರಾಜೇಶ್ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ರೋಟರಿ ವಲಯ ಸೇನಾನಿ ಜಗದೀಶ್ ಪ್ರಶಾಂತ್, ಸಮುದಾಯ ಸೇವಾ ಕಾರ್ಯಗಳ ನಿರ್ದೇಶಕಿ ಪ್ರತಿಭಾ ರೈ, ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ, ನಿರ್ದೇಶಕರಾದ ಬಿ.ಕೆ.ರವೀಂದ್ರ ರೈ, ಜಿ.ಆರ್. ರವಿಶಂಕರ್, ಗಾನಾಪ್ರಶಾಂತ್, ಪ್ರಕಾಶ್ ಪೂವಯ್ಯ, ಶ್ರೀಹರಿ, ಡಿ.ಎಂ.ತಿಲಕ್, ಪ್ರಸಾದ್ ಗೌಡ, ಎಂ.ಪಿ.ನಾಗರಾಜ್, ರೋಷನ್ ಅಣ್ವೇಕರ್, ಎಂ.ಎ.ಅಚ್ಚಯ್ಯ, ಎಸ್.ಎಸ್.ಸಂಪತ್ ಕುಮಾರ್, ಸವಿತಾ ಅರುಣ್, ಶುಭಾ ವಿಶ್ವನಾಥ್, ಲಸಿಕೆ ಕೇಂದ್ರದ ಮುಖ್ಯsಸ್ಥರಾದ ಡಾ.ಶುಭಾರಾಜೇಶ್, ಡಾ. ಅರುಣ್ ಅಸೂಟಿ ಹಾಜರಿದ್ದರು.
ಜಲಸಂರಕ್ಷಣೆ ಜಾಗೃತಿ ಸಂದೇಶದ ಸ್ಟಿಕ್ಕರ್ ಅನಾವರಣ
ನವದೆಹಲಿ ರೋಟರಿ ಕ್ಲಬ್ನೊಂದಿಗೆ ವಲಯ 6 ರ 12 ಕ್ಲಬ್ಗಳು ಜಲ ಸಂರಕ್ಷಣೆಯ ಸಂಬಂಧ ಹಮ್ಮಿಕೊಂಡಿರುವ ಯೋಜನೆಗೆ ಸಂಬಂಧಿಸಿದಂತೆ ಹೊರತರಲಾದ ಜಲಸಂರಕ್ಷಣೆಯ ಸಂದೇಶದ ಸ್ಟಿಕ್ಕರ್ಗಳನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅನಾವರಣಗೊಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ರೋಟರಿ ವಲಯ 6 ರ ಸಹಾಯಕ ರಾಜ್ಯಪಾಲ ಅನಿಲ್ ಎಚ್.ಟಿ. ಮಾತನಾಡಿ, ರೋಟರಿ ವಲಯದಲ್ಲಿ ಕೊಡಗಿನಲ್ಲಿ 9 ರೋಟರಿ ಸಂಸ್ಥೆಗಳಿದ್ದು ಈಗಾಗಲೇ ವಿವಿಧ ಕಾರ್ಯಕ್ರಮಗಳ ಮೂಲಕ ಲಸಿಕೆ ಹಾಕಿಸಿಕೊಳ್ಳುವ ಅಭಿಯಾನ ಮತ್ತು ಕೋವಿಡ್ ಜಾಗೃತಿ ಸಂದೇಶದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಾಗಿ ಹೇಳಿದರು. ಪರಿಸರ, ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಕೊಡಗಿನ 9 ಮತ್ತು ವಲಯ 6 ರ 12 ಕ್ಲಬ್ ಗಳು ವಿಭಿನ್ನ ಕಾರ್ಯಕ್ರಮಗಳನ್ನು ನವದೆಹಲಿಯ ರೋಟರಿ ಸಂಸ್ಥೆಗಳೊಂದಿಗೆ ಜಂಟಿಯಾಗಿ ಆಯೋಜಿಸುತ್ತಿರುವುದಾಗಿಯೂ ಅನಿಲ್ ಹೇಳಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: