ದೇಶಪ್ರಮುಖ ಸುದ್ದಿ

ಮಿಲಿಟರಿ ವಿಮಾನ ಪತನ : 17ಮಂದಿ ಸಾವು ; 40ಮಂದಿ ರಕ್ಷಣೆ

ದೇಶ(ನವದೆಹಲಿ),ಜು.5:- ಮಿಲಿಟರಿ ವಿಮಾನವೊಂದು ಸುಮಾರು 85 ಮಂದಿಯನ್ನು ಹೊತ್ತು ಸಾಗುತ್ತಿದ್ದ ವೇಳೆ ಫಿಲಿಪ್ಪೈನ್ಸ್ ನಲ್ಲಿ ಪತನವಾಗಿದ್ದು, ಕನಿಷ್ಠ 17 ಮಂದಿ ಸಾವನ್ನಪ್ಪಿ ಸುಮಾರು 40 ಮಂದಿಯ ರಕ್ಷಣೆ ಮಾಡಲಾಗಿದೆ.

ಫಿಲಿಪ್ಪೈನ್ಸ್ ನ ಸುಲು ಪ್ರಾಂತ್ಯದ ಜೊಲೋ ದ್ವೀಪದಲ್ಲಿ ವಿಮಾನ ಇಳಿಯಲು ಪ್ರಯತ್ನಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮೂಲಗಳ ಪ್ರಕಾರ ವಿಮಾನದಲ್ಲಿ ಕನಿಷ್ಠ 85 ಜನರು ಇದ್ದರು ಎನ್ನಲಾಗಿದೆ.

ಈ ಬಗ್ಗೆ ಫಿಲಿಪ್ಪೈನ್ಸ್ ನ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಸಿರಿಲಿಟೊ ಸೊಬೆಜಾನಾ ಮಾಹಿತಿ ನೀಡಿದ್ದು, ‘ಫಿಲಿಪೈನ್ಸ್ ನ ವಾಯುಪಡೆಯ (ಪಿಎಎಫ್) ಸಿ-130 ವಿಮಾನದ ಭಗ್ನಾವಶೇಷದಿಂದ ಇಲ್ಲಿಯವರೆಗೆ 40 ಜನರನ್ನು ರಕ್ಷಿಸಲಾಗಿದೆ. ಹೆಚ್ಚಿನ ಪ್ರಯಾಣಿಕರು ಇತ್ತೀಚೆಗೆ ಮೂಲಭೂತ ಮಿಲಿಟರಿ ತರಬೇತಿಯಿಂದ ಪದವಿ ಪಡೆದಿದ್ದರು. ಭಯೋತ್ಪಾದನೆ ವಿರುದ್ಧ ಹೋರಾಡುವ ಜಂಟಿ ಕಾರ್ಯಪಡೆಯ ಭಾಗವಾಗಿ ದ್ವೀಪವೊಂದಕ್ಕೆ ನಿಯೋಜಿಸಲಾಗಿತ್ತು. ಸುಲು ಪ್ರಾಂತ್ಯದ ಜೊಲೋ ದ್ವೀಪಕ್ಕೆ ಇಳಿಯಲು ಪ್ರಯತ್ನಿಸುತ್ತಿದ್ದಾಗ ವಿಮಾನವು ರನ್ ವೇ ಮೇಲೆ ಇಳಿಯುವಲ್ಲಿ ವಿಫಲವಾಗಿ ಪಕ್ಕಕ್ಕೆ ಹೋಗಿ ಅಪಘಾತಕ್ಕೀಡಾಗಿದೆ ಎಂದು ಹೇಳಿದ್ದಾರೆ.

ದಕ್ಷಿಣ ಫಿಲಿಪೈನ್ಸ್‌ನಲ್ಲಿ ಹಲವಾರು ಭಯೋತ್ಪಾದಕ ಗುಂಪುಗಳು ಕಾರ್ಯನಿರ್ವಹಿಸುತ್ತಿದ್ದು, ಹೀಗಾಗಿ ಇಲ್ಲಿ ಭಾರೀ ಸಂಖ್ಯೆಯಲ್ಲಿ ಮಿಲಿಟರಿಯನ್ನು ನಿಯೋಜಿಸಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: