ಮೈಸೂರು

ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ಸ್ಥಳಗಳು ಸಾರ್ವಜನಿಕರಿಗೆ ಮುಕ್ತ : ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಜಿ.ಟಿ.ದೇವೇಗೌಡ

ಮೈಸೂರು,ಜು.5:- ಮೈಸೂರಿನಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಹರಡದಂತೆ ಎರಡು ತಿಂಗಳ ಕಾಲ ಲಾಕ್ ಡೌನ್ ಇದ್ದ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು.

ಮೈಸೂರಿನಲ್ಲಿ ಪ್ರೇಕ್ಷಣೀಯ ಸ್ಥಳಗಳು, ಪ್ರವಾಸಿ ತಾಣಗಳು, ಬಸ್ ಸಂಚಾರ, ಅಂಗಡಿ ಮುಂಗಟ್ಟುಗಳು ಎಲ್ಲವೂ ಸ್ಥಗಿತಗೊಂಡಿದ್ದವು. ಇಂದು ಮತ್ತೆ ಯಥಾ ಸ್ಥಿತಿಗೆ ಮರಳಿದ್ದು, ದೇವಾಲಯಗಳು, ಮೃಗಾಲಯ, ಅರಮನೆ ಎಲ್ಲವೂ ಪ್ರವಾಸಿಗರಿಗೆ ಮುಕ್ತವಾಗಿದೆ.

ಚಾಮುಂಡಿಬೆಟ್ಟದಲ್ಲಿರುವ ತಾಯಿ ಚಾಮುಂಡೇಶ್ವರಿ ದೇವಸ್ಥಾನವು ಇಂದು ಸಾರ್ವಜನಿಕರಿಗೆ ಮುಕ್ತವಾಗಿರುವ ಹಿನ್ನೆಲೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಮತ್ತವರ ಪತ್ನಿ ಲಲಿತಾ  ಅವರು ಇಂದು ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಅವರು ಪೂಜೆ ನೆರವೇರಿಸಿ ಮಂಗಳಾರತಿ ನೀಡಿದರು.  ಈ ಸಂದರ್ಭ ಮಾತನಾಡಿದ ಶಾಸಕರು ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ, ಕೊರೋನಾ ಆದಷ್ಟು ಬೇಗ ತೊಲಗಿ ಜನಜೀವನ ಯಥಾಸ್ಥಿತಿಗೆ ಮರಳಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಇಂದು ದೇವರ ದರ್ಶನಕ್ಕೆ ಅನುವು ಮಾಡಿಕೊಡುತ್ತಿದ್ದ ಹಾಗೆ ದೇವಾಲಯವನ್ನು ಶುಚಿಗೊಳಿಸಿ, ಸ್ವಚ್ಛತೆಯನ್ನು ಕಾಯ್ದುಕೊಂಡು ದೇವಿಗೆ ಚೆನ್ನಾಗಿ ಅಲಂಕಾರ ಮಾಡಿದ್ದಾರೆ. ದೇವಾಲಯದಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದ್ದ ಹಾಗೆ ಮಳೆ ಕೂಡ ಎಲ್ಲ ಕಡೆ ಆರಂಭವಾಗಿದೆ. ಇದನ್ನು ನೋಡಿದರೆ ದೈವ ಕೃಪೆ ಇದ್ದರೇನೆ ಮಳೆ ಬೆಳೆ ಜನರಿಗೆ  ಸಮೃದ್ಧಿಯಾಗುವುದು, ತಾಯಿ ಚಾಮುಂಡೇಶ್ವರಿ ದುಷ್ಟರನ್ನು ಸಂಹರಿಸಿದಳು ಅಂತ ಏನು ಹೇಳುತ್ತಾರೋ, ಈ ಕೊರೋನಾವನ್ನು ಸಂಹರಿಸುವಂತಹ ಶಕ್ತಿ ತಾಯಿಗಿದೆ, ದೇವರಿಗಿದೆ. ಈ ಕೂಡಲೇ ತಮ್ಮ ದರ್ಶನದಿಂದ ಜನರೇನು ಆರೋಗ್ಯವನ್ನು ಪಡೆಯುತ್ತಾರೋ ಅದೇ ರೀತಿ ಕೊರೋನಾವನ್ನು ಕೂಡ ದೂರ ಮಾಡಿ ಎಲ್ಲ ಜನರಿಗೆ ಆರೋಗ್ಯ ನೀಡಿ, ಬಡಜನತೆ ಸಂಕಷ್ಟಕ್ಕೇನು ಸಿಕ್ಕಿದ್ದಾರೆ ಅವರಿಗೆಲ್ಲರಿಗೂ ಒಳ್ಳೆಯದಾಗಲಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಆ ತಾಯಿ ಅವಕಾಶ ಮಾಡಿಕೊಡಲೆಂದು ಪ್ರಾರ್ಥಿಸಿದರು. ಆಷಾಢ ಮಾಸದ ಬಗ್ಗೆ ಉಸ್ತುವಾರಿ ಸಚಿವರ ಜೊತೆ ಮಾತನಾಡಿ ಯಾವ ರೀತಿ ಮಾಡಬೇಕೆಂದು ತೀರ್ಮಾನ ಕೈಗೊಂಡು ಬಳಿಕ ತಿಳಿಸುವುದಾಗಿ ತಿಳಿಸಿದರು.

ದೇವಸ್ಥಾನಕ್ಕೆ ಬರುವವರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ, ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ ಕೊರೋನಾ ಸೋಂಕು ಹರಡುವಿಕೆ ತಡೆಯಲು ಸಹಕರಿಸಿ ಎಂದು ತಿಳಿಸಿದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: