ಕರ್ನಾಟಕಪ್ರಮುಖ ಸುದ್ದಿಮೈಸೂರು

ಈ ಬಾರಿಯೂ ಆಷಾಢದಲ್ಲಿ ಭಕ್ತರಿಗಿಲ್ಲ ತಾಯಿ ಚಾಮುಂಡಿಯ ದರ್ಶನ : ಆಷಾಢ ಶುಕ್ರವಾರಕ್ಕೆ ಪ್ರವೇಶ ನಿರ್ಬಂಧಿಸಿ ಡಾ.ಬಗಾದಿ ಗೌತಮ್ ಆದೇಶ

ಮೈಸೂರು,ಜು.6:- ಮೈಸೂರು ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನ, ಚಾಮುಂಡಿಬೆಟ್ಟ ಹಾಗೂ ಉತ್ತನಹಳ್ಳಿ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಾಲಯಗಳಲ್ಲಿ 2021ನೇ ಸಾಲಿನ ಆಷಾಢ ಮಾಸದಲ್ಲಿನ ಶುಕ್ರವಾರಗಳಿಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.
ಆಷಾಢ ಶುಕ್ರವಾರಗಳಲ್ಲಿ ಪ್ರತಿದಿನ 60ಸಾವಿರದಿಂದ ಒಂದು ಲಕ್ಷದವರೆಗೆ ಭಕ್ತಾದಿಗಳು ಅಮ್ಮನವರ ದರ್ಶನ ಪಡೆಯಲು ಆಗಮಿಸುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಕೋವಿಡ್ 19 ಸಾಂಕ್ರಾಮಿಕ ರೋಗವು ತೀವ್ರವಾಗಿ ಹರಡುವುದರಿಂದ ಆಷಾಢ ಮಾಸದಲ್ಲಿ ಭಕ್ತಾದಿಗಳ ದರ್ಶನಕ್ಕೆ ದೇವಸ್ಥಾನವನ್ನು ಮುಕ್ತಗೊಳಿಸಿದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗವು ಹರಡುವ ಸಾಧ್ಯತೆ ಇದೆ. ಆಷಾಢದಲ್ಲಿ ಇತರೇ ಸಾರ್ವಜನಿಕ ರಜಾ ದಿನಗಳು, ಶನಿವಾರ ಮತ್ತು ಭಾನುವಾರಗಳಂದು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. 2020ನೇ ಸಾಲಿನಲ್ಲಿಯೂ ಸಹ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರು/ಭಕ್ತಾದಿಗಳ ಪ್ರವೇಶವನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಆಷಾಢ ಮಾಸದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಅಧಿಕಾರಿಗಳು, ಅರ್ಚಕರು/ಸಿಬ್ಬಂದಿಗಳು ಯಾವುದೇ ಲೋಪದೋಷವಿಲ್ಲದಂತೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಅದಕ್ಕಾಗಿ ಈ ಬಾರಿಯೂ ಕೂಡ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯ ಹಾಗೂ ಉತ್ತನಹಳ್ಳಿ ಶ್ರೀಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಾಲಯಗಳಿಗೆ ಕರ್ನಾಟಕ ಸಾಂಕ್ರಾಮಿಕ ರೋಗಗಳು ರೆಗ್ಯೂಲೇಷನ್ 2020 ನಿಯಮ 12ರಲ್ಲಿ ಡಿಸೆಸ್ಟರ್ ಮ್ಯಾನೇಜ್ ಮೆಂಟ್ ಆ್ಯಕ್ಟ್ 2005 ಕಲಂ 12ರಲ್ಲಿ ಹಾಗೂ ಕಲಂ 30(2) ಮತ್ತು 34ರ ಅಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸಾರ್ವಜನಿಕರ ಮತ್ತು ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದಾಗಿ ತಿಳಿಸಿದ್ದಾರೆ.
09/07/2021 ಆಷಾಢ ಅಮಾವಾಸ್ಯೆ, 16/07/2021 1ನೇ ಆಷಾಢ ಶುಕ್ರವಾರ, 23/07/2021 2ನೇ ಆಷಾಢ ಶುಕ್ರವಾರ, 30/07/2021 3ನೇ ಆಷಾಢ ಶುಕ್ರವಾರ ಮತ್ತು ಅಮ್ಮನವರ ವರ್ಧಂತಿ, 06/08/2021 4ನೇ ಆಷಾಢ ಶುಕ್ರವಾರ, 08/08/2021 ಭೀಮನ ಅಮಾವಾಸ್ಯೆ ಇದಲ್ಲದೆ ಆಷಾಢ ಶನಿವಾರ ,ಭಾನುವಾರ, ಮತ್ತು ಸರ್ಕಾರಿ ಸಾರ್ವತ್ರಿಕ ರಜಾ ದಿನಗಳಂದು ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
05/07/2021ರಿಂದ ಸಂಜೆ 6ಗಂಟೆಯ ನಂತರ ಶ್ರೀಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ನಡೆಯುವ ಧಾರ್ಮಿಕ ಆಚರಣೆಯನ್ನು ಹೊರತುಪಡಿಸಿ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿ ಆದೇಶಿಸಿದ್ದಾರೆ.
ನಿಷೇಧಿತ ಅವಧಿಯಲ್ಲಿ ಶ್ರೀಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ನಡೆದು ಬಂದಿರುವ ರೂಢಿ ಸಂಪ್ರದಾಯದಂತೆ ಜರುಗುವ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಅಧಿಕಾರಿಗಳು, ಅರ್ಚಕರು ಸಿಬ್ಬಂದಿಗಳು ಮಾತ್ರ ದೇವಾಲಯದ ಆವರಣದಲ್ಲಿ ನಡೆಸಲಿದ್ದಾರೆ. ನಿಷೇಧಿತ ಅವಧಿಯಲ್ಲಿ ಮೆಟ್ಟಿಲು ಮಾರ್ಗದ ಮೂಲಕವೂ ಭಕ್ತರು ಬರುವುದಕ್ಕೆ ನಿರ್ಬಂಧವಿಧಿಸಲಾಗಿದೆ. ದಾಸೋಹ, ಊಟದ ವ್ಯವಸ್ಥೆ, ಪ್ರಸಾದ ವಿತರಣೆ ಕಡ್ಡಾಯ ನಿಷೇಧ ವಿಧಿಸಲಾಗಿದೆ.
ದೇವಾಲಯದಲ್ಲಿ ನಡೆದು ಬಂದಿರುವ ಸಂಪ್ರದಾಯ ಪದ್ಧತಿಯಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕಾಗಿರುವುದರಿಂದ ಇದಕ್ಕೆ ಅಗತ್ಯವಿರುವವರು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು ಹಾಗೂ ಚಾಮುಂಡಿಬೆಟ್ಟದ ಗ್ರಾಮಸ್ಥರಿಗೆ ಮಾತ್ರ ದೇವಾಲಯದಲ್ಲಿ ಪೂಜಾಕೈಂಕರ್ಯಗಳು ನಡೆಯುವ ಸಂದರ್ಭದಲ್ಲಿ ಆಗಮಿಸಿದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿನ ಮೇಲೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ದೇವಾಲಯದ ರೂಢಿ ಸಂಪ್ರದಾಯದಂತೆ ಮಹಾಮಂಗಳಾರತಿ ಮುಕ್ತಾಯಗೊಂಡ ತಕ್ಷಣ ದೇವಾಲಯದ ಬಾಗಿಲನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: