ಮೈಸೂರು

25ಕೋಟಿ ಆಸ್ತಿ ವಶಕ್ಕೆ ಪಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

ಮೈಸೂರು,ಜು.6:- ಮೈಸೂರು ನಗರದ ಜಯಲಕ್ಷ್ಮಿಪುರಂ ಬಡಾವಣೆಯ 3ನೇ ಬ್ಲಾಕಿನ ಕಣಿಯರ ಸಮಾಜದ ಮಕ್ಕಳಿಗೆ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕಾಗಿ ಉಚಿತವಾಗಿ  ನೀಡಿದ್ದ ಮೂಲೆ ನಿವೇಶನವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡಿರುವುದನ್ನು ಪತ್ತೆ ಹಚ್ಚಿದ ಮುಡಾ ತನ್ನ ವಶಕ್ಕೆ ಪಡೆದಿದೆ.

ಖಾಸಗಿ ವ್ಯಕ್ತಿಯೊಬ್ಬರಿಗೆ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು 27ವರ್ಷ ಗುತ್ತಿಗೆ ಕರಾರು ಮಾಡಿಕೊಂಡಿರುವುದು ಕಂಡು ಬಂದಿದ್ದು, 2015/09/07ರಂದು ಅಂದಿನ ಆಯುಕ್ತರು ಷರತ್ತು ಉಲ್ಲಂಘನೆ ನೋಟೀಸು ನೀಡಿದ್ದು ಸಂಘದವರಿಂದ ಸಮಂಜಸ ಉತ್ತರ  ಬಂದಿರಲಿಲ್ಲ. ಕಣಿಯರ ಸೇವಾ ಸಮಾಜದವರು ಮಂಜೂರಾತಿ ಉದ್ದೇಶಕ್ಕೆ ಉಪಯೋಗಿಸಿಕೊಳ್ಳದೆ ಮಂಜೂರಾತಿ ಸಂದರ್ಭದಲ್ಲಿ ವಿಧಿಸಿದ್ದ ಷರತ್ತನ್ನು ಉಲ್ಲಂಗನೆ ಮಾಡಿರುವುದರಿಂದ ಮಂಜೂರಾತಿಯನ್ನು ರದ್ದುಪಡಿಸಿ ಪ್ರಾಧಿಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಪ್ರಾಧಿಕಾರಕ್ಕೆ ನಿಶ್ಚಿತ ಆದಾಯ ಬರುವ ರೀತಿಯಲ್ಲಿ ಈ ಕಟ್ಟಡವನ್ನು ಉಪಯೋಗಿಸಿಕೊಳ್ಳಲು ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಕಟ್ಟಡದ ಸ್ವಾಧೀನವನ್ನು ಪ್ರಾಧಿಕಾರದ ವಶಕ್ಕೆ ಪಡೆಯಲಾಗಿದ್ದು ಕಟ್ಟಡದ ಅಂದಾಜು ಮೌಲ್ಯ ಸುಮಾರು 25ಕೋಟಿ ರೂ.ಗಳಾಗಿರುತ್ತದೆ. ವಾಣಿಜ್ಯ ಕಟ್ಟಡದ ಬಾಡಿಗೆಯಿಂದ ಇನ್ನು ಮುಂದೆ ಮಾಸಿಕ ಸುಮಾರು 5-6 ಲಕ್ಷ ಬಾಡಿಗೆಯು ಪ್ರಾಧಿಕಾರಕ್ಕೆ ಸಂದಾಯವಾಗಲಿದೆ. ಕಟ್ಟಡವನ್ನು ಪ್ರಾಧಿಕಾರದ ವಶಕ್ಕೆ ಪಡೆಯುವ ಸಂದರ್ಭದಲ್ಲಿ ಸ್ಥಳದಲ್ಲಿ ಆಯುಕ್ತರಾದ ಡಾ.ಡಿ.ಬಿ.ನಟೇಶ್, ಅಧೀಕ್ಷಕ ಅಭಿಯಂತರರಾದ ಶಂಕರ್, ಸಂಬಂಧಪಟ್ಟ ವಲಯಾಧಿಕಾರಿ, ಸಹಾಯಕ ಅಭಿಯಂತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: