ಮೈಸೂರು

ನಾಳೆ ಮೈಸೂರಿಗೆ ದಸರಾ ಗಜ ಪಯಣ

ದಸರಾ ಆನೆಗಳು ನಾಳೆ ಕಾಡಿನಿಂದ ನಾಡಿನತ್ತ ಪಯಣ ಬೆಳೆಸಲಿವೆ. ಜಿಲ್ಲಾ ಆಡಳಿತ ಆನೆಗಳನ್ನು ಬರಮಾಡಿಕೊಳ್ಳಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಗಜಪಯಣವನ್ನು ದಸರಾ ಹಬ್ಬದ ಮೊದಲ ಹೆಜ್ಜೆ ಎಂದೇ ಪರಿಗಣಿಸಲಾಗಿದೆ. ಅಕ್ಟೋಬರ್ 1ಕ್ಕೆ ದಸರಾ ಆರಂಭಗೊಳ್ಳಲಿದ್ದು, ದಸರಾ ಮುಖ್ಯ ಆಕರ್ಷಣೆಯಾಗಿರುವ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಮೈಸೂರು ನಗರಕ್ಕೆ ಪೂರ್ವಭಾವಿಯಾಗಿ ಆಗಮಿಸಿ ಪ್ರತಿವರ್ಷದಂತೆ ತಾಲೀಮು ನಡೆಸಲಿವೆ.

ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಎಚ್ ಸಿ ಮಹದೇವಪ್ಪ ಅವರು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯ ನಾಗಪುರ ಗಿರಿಜನ ಶಾಲೆಯ ಬಳಿ ಆಯೋಜನೆಯಾಗಿರುವ ಕಾರ್ಯಕ್ರಮದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಗಜಪಯಣಕ್ಕೆ ಚಾಲನೆ ನೀಡಲಿದ್ದಾರೆ.

ಮೊದಲ ತಂಡದಲ್ಲಿ ಆರು ಆನೆಗಳು ಮೈಸೂರಿನತ್ತ ಪ್ರಯಣ ಬೆಳೆಸಲಿದ್ದು, ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನ ಹಾಗೂ ಸಹವರ್ತಿಗಳಾಗಿ ಪಾಲ್ಗೊಳ್ಳುವ ಬಲರಾಮ, ಅಭಿಮನ್ಯು, ಗಜೇಂದ್ರ, ಕಾವೇರಿ ಮತ್ತು ವಿಜಯ ಆನೆಗಳು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯದಿಂದ ಹೊರಡಲಿವೆ ಎನ್ನಲಾಗಿದೆ. ಆದರೆ ಆನೆಗಳನ್ನು ಇನ್ನಷ್ಟೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕಾಗಿದ್ದು, ಮೊದಲ ತಂಡದಲ್ಲಿ ಯಾವ ಯಾವ ಆನೆಗಳು ಹೊರಡಲಿವೆ ಎಂಬುದು ಖಾತ್ರಿಯಾಗಿಲ್ಲ.

ಕಾಡಿನಿಂದ ಆಗಮಿಸುವ ಆನೆಗಳನ್ನು ಅರಣ್ಯಭವನದ ಬಳಿ ಔಪಚಾರಿಕವಾಗಿ ಸ್ವಾಗತಿಸಲಾಗುವುದು. ಸ್ವಲ್ಪ ಸಮಯ ಅರಣ್ಯಭವನದ ಆವರಣದಲ್ಲಿ ವಿಶ್ರಾಂತಿ ತೆಗೆದುಕೊಂಡು ಹೊರಡುವ ಆನೆಗಳನ್ನು ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಸಾಂಪ್ರದಾಯಿಕ ಸ್ವಾಗತ ಕೋರಲಾಗುವುದು.   

ಪ್ರತಿವರ್ಷ ದಸರಾಗೆ ಆಗಮಿಸುವ ಆನೆಗಳು 56 ರಿಂದ 60 ದಿನ ಆರಮನೆ ಆವರಣದಲ್ಲೇ ತಂಗಲಿದ್ದು, ಜಿಲ್ಲಾಡಳಿತ ನೀಡುವ ರಾಜೋಪಚಾರ ಸ್ವೀಕರಿಸುತ್ತವೆ. ಜಂಬೂಸವಾರಿ ಹೊರಡುವ ದಾರಿಯೂದ್ದಕ್ಕೂ ಹಲವು ದಿನಗಳ ಕಾಲ ಪೂರ್ವಾಭ್ಯಾಸ ನಡಿಗೆ ತಾಲೀಮು ನಡೆಸಲಿದ್ದು, ಈ ಸಂದರ್ಭ ನಗರದ ಜನ ಮತ್ತು ವಾಹನ ಜಂಗುಳಿ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯಲ್ಲೂ ಸಜ್ಜಾಗಿರುತ್ತದೆ. ಆದರೆ ಈ ಬಾರಿ ಮೊಲದ ತಂಡದ ಆನೆಗಳನ್ನು 45 ದಿನ ಎರಡನೇ ತಂಡದ ಆನೆಗಳನ್ನು 25 ರಿಂದ 30 ದಿನ ಇರಿಸಿಕೊ‍ಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಆನೆಗಳಿಗೆ ಸಿಸಿ ಕ್ಯಾಮರ ಕಣ್ಗಾವಲು

ಆನೆಗಳು ತಂಗಲಿರುವ ಶಿಬಿರದಲ್ಲಿ ಅನಾಹುತವೇನಾದರು ಜರುಗಿದರೆ ತಕ್ಷಣ ಕ್ರಮಕೈಗೊಳ್ಳಲು ಅನುಕೂಲವಾಗುವಂತೆ ಅರಣ್ಯ ಇಲಾಖೆ  ಸಿಸಿ ಕ್ಯಾಮರಾಗಳನ್ನು ಅಳವಡಿಸಲು ನಿರ್ಧರಿಸಿದೆ. ದಸರಾದಲ್ಲಿ ಆನೆಗಳು ಮುಖ್ಯ ಆಕರ್ಷಣೆಯಾಗಿರುವುದರಿಂದ ದಸರಾಗೆ ಬರುವ ಪ್ರವಾಸಿಗರು ಆನೆ ಶಿಬಿರದ ಬಳಿ ತೆರಳಿ ಸೆಲ್ಫೀ ತೆಗೆಯಲು ಮುಂದಾಗಬಹುದು. ಈ ಸಂದರ್ಭ ಆನೆಗಳು ಕೆರಳುವ ಸಾಧ್ಯತೆ ಇದ್ದು, ಈ ರೀತಿಯ ಘಟನೆಗಳು ಸಂಭವಿಸದಂತೆ ತಡೆಯಲು ಸಿಸಿ ಕ್ಯಾಮರಾ ಕಣ್ಗಾವಲು ಸಹಕಾರಿಯಾಗಬಹುದು ಎಂದು ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ.

Leave a Reply

comments

Related Articles

error: