ಕರ್ನಾಟಕಪ್ರಮುಖ ಸುದ್ದಿಮೈಸೂರು

ಬಿಜೆಪಿ ಸರ್ಕಾರ ಇದು ಭಂಡ ಸರಕಾರ, ಮಾನವೀಯತೆಯ ಇಲ್ಲದ ಸರಕಾರ : ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು,ಜು.7:- ಬಿಜೆಪಿ ಸರ್ಕಾರ ಇದು ಭಂಡ ಸರಕಾರ. ಮಾನವೀಯತೆಯ ಇಲ್ಲದ ಸರಕಾರ ಎಂದು ರಾಜ್ಯ ಸರ್ಕಾರದ ವಿರುದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರು ಕಾಂಗ್ರೆಸ್ ಭವನದಲ್ಲಿಂದು ಕೆಪಿಸಿಸಿಯ ಮೈಸೂರು ನಗರ ಹಾಗೂ ಗ್ರಾಮಾಂತರ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಪಕ್ಷ ಸೇರ್ಪಡೆ, ಸಹಾಯ ಹಸ್ತ, ಸೈಕಲ್ ಜಾಥಾಗೆ ಚಾಲನೆ ನೀಡಿ  ಮಾತನಾಡಿದ ಅವರು ಬಿಪಿಎಲ್ ಕಾರ್ಡ್ ದಾರರಿಗೆ ತಲಾ 10 ಸಾವಿರ ಕೊಡಬೇಕಿತ್ತು. ನಮ್ಮ ಸರಕಾರ ಇದ್ದಿದ್ದರೆ 10 ಸಾವಿರ ಹಣ, 10 ಕೆಜಿ ಅಕ್ಕಿ ಕೊಡ್ತಿದ್ದೆವು. ಇವರು ದುಡ್ಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಇಂಥಹ ಕೆಟ್ಟ ಸರಕಾರವನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿರಲಿಲ್ಲ. ಯಡಿಯೂರಪ್ಪ ಮತ್ತು ಅವರ ಮಗ ಜೆಸಿಬಿಯಲ್ಲಿ ಅಗೆಯುತ್ತಾ ಹಣ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಹೇಳುವುದೆಲ್ಲಾ ಸುಳ್ಳು. ಪ್ರಧಾನಿ ಅಚ್ಛೆ ದೀನ್ ಆಯೇಗಾ ಅಂದರೆ ಕೆಟ್ಟ‌ ದಿನ ಬರುತ್ತಿದೆ ಅಂತ ಅರ್ಥ. ಎಲ್ಲರೂ ನಾಚಿಕೆ ಆಗುವಷ್ಟು ಲಂಚ ಪ್ರಕರಣ ನಡೆಯುತ್ತಿದೆ. ಅವರದೇ ಪಾರ್ಟಿಯವರೆ ಅವರ ಸಚಿವರಿಗೆ ಹಣ ಕೊಟ್ಟು ಕೆಲಸ ತೆಗೆದುಕೊಳ್ಳುತ್ತಿದ್ದಾರೆ. 10% ಇಲ್ಲದೆ ಯಾವ ಫೈಲ್ ಕೂಡ ಈ ಸರಕಾರದಲ್ಲಿ ಮುಂದಕ್ಕೆ ಹೋಗುತ್ತಿಲ್ಲ. ಯಡಿಯೂರಪ್ಪನದು ಸ್ವಾತಂತ್ರ್ಯ ನಂತರದ ಅತ್ಯಂತ ಕೆಟ್ಟ ಮತ್ತು ಭ್ರಷ್ಟ ಸರಕಾರ. ಈ ರಾಜ್ಯವನ್ನು ಇವರು ಹಾಳು ಮಾಡುತ್ತಾರೆ. ಯಡಿಯೂರಪ್ಪ ಎರಡೇ ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಸಾಲ‌ ಮಾಡಿದ್ದಾರೆ. ಇನ್ನು ಈ ಸರಕಾರ ಮುಂದುವರಿದರೆ ಎಷ್ಟು ಸಾಲ ಮಾಡಬಹುದು ಲೆಕ್ಕ ಹಾಕಿ. ಈ ಸರಕಾರ ಬೇಕಾ ಎಂದು ಕಿಡಿಕಾರಿದರು.

ಪದೇ ಪದೇ ದ್ರೋಹ ಮಾಡುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು‌

ಪದೇ ಪದೇ ದ್ರೋಹ ಮಾಡುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು‌. ಅಧಿಕಾರಕ್ಕಾಗಿ ಯಾರೂ ಪಕ್ಷಕ್ಕೆ ಬರಬಾರದು. ಜನಸೇವೆಯ ಗುರಿ ಇದ್ದವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಎಂದರೆ ಒಂದು ಚಳವಳಿ, ಬಡವರ ಪಕ್ಷ. ನಾವು ನೊಂದವರ ಪರ. ಅನ್ಯಾಯಕ್ಕೆ, ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಕರ್ತವ್ಯ. ಯಡಿಯೂರಪ್ಪ ಹಿಂಬಾಗಿಲಿನಿಂದ ಬಂದು ಸಿಎಂ ಆಗಿದ್ದಾರೆ. 17 ಶಾಸಕರನ್ನು ಖರೀದಿಸಿ ಸರ್ಜಾರ ರಚನೆ ಮಾಡಿ ಆಡಳಿತ ನಡೆಸುತ್ತಿದ್ದಾರೆ. ಕೊರೊನಾ ಮೂರನೇ ಅಲೆ ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಬರುವ ಮಾಹಿತಿ ಇದೆ. ಒಂದು, ಎರಡನೇ ಅಲೆಯಲ್ಲಿ ನಮಗೇನೂ ಆಗಿಲ್ಲ ಎಂದು ಜನ ಮೂರನೇ ಅಲೆಯನ್ನು ನಿರ್ಲಕ್ಷ್ಯ ಮಾಡಬಾರದು. ಇದು ದೊಡ್ಡ ಸಾಂಕ್ರಾಮಿಕ ರೋಗ. ಅದರಿಂದ ದೂರ ಇರಲು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಎರಡನೇ ಅಲೆಯಲ್ಲಿ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಸರ್ಕಾರ ಹೇಳುವುದಕ್ಕಿಂತ ಹತ್ತು ಪಟ್ಡು ಹೆಚ್ಚು ಜನ ಮರಣ ಹೊಂದಿದ್ದಾರೆ. ಮೂರೂವರೆ ಲಕ್ಷ ಮಂದಿ ಸತ್ತಿರಬಹುದು.  ಪ್ರಧಾನಿ ನರೇಂದ್ರ ಮೋದಿಯವರು ಅಚ್ಛೇ ದಿನ್ ಬರುತ್ತದೆ ಎಂದರೆ ಕೆಟ್ಟ ದಿನಗಳು ಮುಂದೆ ಕಾದಿವೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದರು.

ಯಡಿಯೂರಪ್ಪ ಅವರು ಈಗಾಗಲೇ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜನರಿಗೆ ಒಳ್ಳೆಯದಾಗಬೇಕಾದರೆ ಈ ಸರ್ಕಾರ ತೊಲಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಕಳೆದ ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ ಪೆಟ್ರೋಲ್, ಡೀಸೆಲ್ ಮಾರಾಟದ ಮೇಲೆ ವಸೂಲಿ‌ ಮಾಡಿರುವ ತೆರಿಗೆ ಒಂದು ಲಕ್ಷ ಇಪ್ಪತ್ತು  ಸಾವಿರ ಕೋಟಿ. ಕೇಂದ್ರ ಸರ್ಕಾರ ಕೂಡಲೇ ತೆರಿಗೆ ಕಡಿಮೆ ಮಾಡಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಎಂದರೆ ತಿಗಣೆ ಇದ್ದಂತೆ. ಜನರ ರಕ್ತ ಹೀರುವುದು ಅವರ ಕೆಲಸ. ಆದರೆ ಕಾಂಗ್ರೆಸ್ ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತದೆ.ಸತ್ತವರ ಲೆಕ್ಕ ಸುಳ್ಳೇಳುತ್ತಿದ್ದಾರೆ. ಅದಕ್ಕಾಗಿ ಜನರನ್ನು ತಲುಪತಕ್ಕ ಒಂದು ಕೆಲಸವನ್ನು ಹಮ್ಮಿಕೊಂಡಿದ್ದು, ಸಹಾಯ ಹಸ್ತ ಅಂತ ಕರೆಯುವುದು. ಜನರ ಬಳಿ ಹೋಗಬೇಕು. ಕಾರ್ಯಕರ್ತರು ಮನೆ ಮನೆಗೆ ಹೋಗಿ  ಅವರಿಗೆ ಸಾಂತ್ವನ ಹೇಳಿ ಅವರ ಕಷ್ಟ ಸುಖ ಕೇಳಿ, ಅವರಿಗೆ ಕಾಯಿಲೆ ಬಂದಿತ್ತಾ? ಕಾಯಿಲೆ ಬಂದ ಮೇಲೆ ಸತ್ತೋಗಿದ್ದಾರಾ? ಅವರಿಗೆ ಉದ್ಯೋಗ ಇತ್ತಾ?  ಅವುಗಳ ಮಾಹಿತಿ ಪಡೆಯಲು ಇದೆಲ್ಲ ಮಾಡುತ್ತಿದ್ದಾರೆ. ಸಹಾಯ ಬೇಕಾದಲ್ಲಿ ಸಹಾಯ ಹಸ್ತ  ನೀಡುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧ್ರುವ ನಾರಾಯಣ, ಮಾಜಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ರಮಾನಾಥ ರೈ,  ಶಾಸಕರಾದ ಮಂಜುನಾಥ್, ಮಾಜಿ ಶಾಸಕರಾದ ವಾಸು, ಸೋಮಶೇಖರ್,ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್, ಹೆಚ್.ಎ.ವೆಂಕಟೇಶ್,  ಮೈಸೂರು ನಗರ ಅಧ್ಯಕ್ಷ ಮೂರ್ತಿ, ಗ್ರಾಮಾಂತರ ಸಮಿತಿ ಅಧ್ಯಕ್ಷ ಡಾ. ವಿಜಯಕುಮಾರ್ ಮತ್ತಿತರರು ಹಾಜರಿದ್ದರು.

ವೇದಿಕೆಯೇರಿ ಗುಂಪು ಗುಂಪಾಗಿ ಬಂದ ಕಾರ್ಯಕರ್ತರನ್ನು ಚದುರಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಹರಸಾಹಸಪಟ್ಟರು. ಏಯ್ ಯಾರ್ರಿ ಅದು ಇಳಿರಿ ಕೆಳಗೆ ಎಂದು ಕಾರ್ಯಕರ್ತರನ್ನು ಚದುರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: