ಮೈಸೂರು

ಮಹಾಜನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಆರ್. ವಾಸುದೇವಮೂರ್ತಿ ನಿಧನಕ್ಕೆ ಸುತ್ತೂರು ಶ್ರೀ ಸಂತಾಪ

ಮೈಸೂರು,ಜು.7:- ಮಹಾಜನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿದ್ದ   ಆರ್. ವಾಸುದೇವಮೂರ್ತಿಯವರು ದೈವಾಧೀನರಾದುದು ವಿಷಾದದ ಸಂಗತಿ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಆರ್. ವಾಸುದೇವಮೂರ್ತಿಯವರು ಮೈಸೂರಿನ ಸಾರ್ವಜನಿಕ ಜೀವನದಲ್ಲಿ ಎದ್ದು ಕಾಣುವಂಥ ವ್ಯಕ್ತಿತ್ವ ಹೊಂದಿದ್ದರು. ಎಸ್‍ ಬಿಆರ್‍ಆರ್ ಮಹಾಜನ ವಿದ್ಯಾಸಂಸ್ಥೆಗಳ ಅಧ್ಯಕ್ಷರಾಗಿ ಅವರು ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದರು. ಮೈಸೂರಿನ ಪ್ರಭಾ ಚಿತ್ರಮಂದಿರದ ಮಾಲೀಕರೂ ಆಗಿದ್ದರು. ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿಗಳ ಆರಾಧಕರು-ಪೋಷಕರು ಆಗಿದ್ದರು. ಖ್ಯಾತ ಸಾಹಿತಿ ಪ್ರಭುಶಂಕರವರ ಆತ್ಮೀಯ ಒಡನಾಡಿಗಳಾಗಿದ್ದರು. ಮೈಸೂರು ಜಿಲ್ಲೆಯ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರೋಟರಿ ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಮೂರ್ತಿಯವರು ಹಲವಾರು ಸೇವಾಸಂಸ್ಥೆಗಳ ಮೂಲಕ ಸಮಾಜಸೇವೆಯಲ್ಲಿ ತೊಡಗಿದ್ದರು. ಮೈಸೂರು ನಾಗರಿಕರ ವೇದಿಕೆಯಲ್ಲೂ ಸಕ್ರಿಯರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರೂ ಆಗಿದ್ದರು. ಸುತ್ತೂರು ಶ್ರೀಮಠದೊಡನೆ ಗೌರವಯುತವಾದ ಸಂಬಂಧ ಹೊಂದಿದ್ದ ಶ್ರೀಯುತರು ನೇರ ನಡೆ-ನುಡಿಯ, ಸದಾ ಹಸನ್ಮುಖರಾಗಿದ್ದ ಸ್ನೇಹಪರ ವ್ಯಕ್ತಿತ್ವ ಹೊಂದಿದ್ದರು.

ದಿವಂಗತರ ಆತ್ಮಕ್ಕೆ ಶಾಂತಿಯನ್ನು, ಅವರ ಧರ್ಮಪತ್ನಿ, ಕುಟುಂಬ ಸದಸ್ಯರು ಮತ್ತು ಬಂಧು ಬಾಂಧವರು ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು  ಅವರು ಹಾರೈಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: