ಕರ್ನಾಟಕಪ್ರಮುಖ ಸುದ್ದಿ

 ಸುಸಜ್ಜಿತ ಭವನ ನಿರ್ಮಾಣ ನೌಕರರ ಇತಿಹಾಸದಲ್ಲಿ ಮೈಲುಗಲ್ಲು : ಸಂಸದ ಬಿ.ವೈ.ರಾಘವೇಂದ್ರ

ರಾಜ್ಯ( ಶಿವಮೊಗ್ಗ), ಜು. 8:-  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸ್ಥಾಪನೆಗೊಂಡು ಶತಮಾನೋತ್ಸವ ಆಚರಿಸುತ್ತಿರುವ ಶುಭಸಂದರ್ಭದಲ್ಲಿ 12ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅತ್ಯಾಧುನಿಕ, ಮಾದರಿ ಹಾಗೂ ಸುಸಜ್ಜಿತ ಸಭಾಭವನ ನೌಕರರ ಇತಿಹಾಸದಲ್ಲಿ ಮೈಲುಗಲ್ಲಾಗಿ ಉಳಿಯಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.

ಅವರು   ನಗರದ ಕೆ.ಇ.ಬಿ.ವೃತ್ತದಲ್ಲಿ ಹಳೆಯ ನೌಕರರ ಭವನದ ಆವರಣದಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಿದ ನಂತರ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಕಳೆದ ದಶಕಗಳ ಅವಧಿಯಲ್ಲಿ ನೌಕರರ ಸಂಘವು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಮತ್ತು ಅವಲಂಬಿತರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘದ ನೇತೃತ್ವ ವಹಿಸಿದ ಸಂಘದ ಪದಾಧಿಕಾರಿಗಳೆಲ್ಲರ ಶ್ರಮ ಮೆಚ್ಚುವಂತದ್ದಾಗಿದೆ ಎಂದವರು ನುಡಿದರು.

ನಿರ್ಮಿಸಲು ಉದ್ದೇಶಿಸಿರುವ ಕಟ್ಟಡದ ಕಾಮಗಾರಿ ಮುಂದಿನ 2ವರ್ಷಗಳ ಅವಧಿಯಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿದ ಅವರು, ನೌಕರರು ಸರ್ಕಾರ ಮತ್ತು ರಾಜ್ಯದ ಜನರ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸರ್ಕಾರದ ಬಹುತೇಕ ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ನೌಕರರ ಕಾರ್ಯ ಮಹತ್ವದ್ದಾಗಿದೆ. ಸರ್ಕಾರವೂ ಕೂಡ ತನ್ನ ಆದಾಯದ ಬಹುಪಾಲನ್ನು ಆಡಳಿತ ವ್ಯವಸ್ಥೆಗೆ ವಿನಿಯೋಗಿಸುತ್ತಿದೆ ಎಂದವರು ನುಡಿದರು.

ನೌಕರರು ತಾವು ತಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವಂತೆ ಹಾಗೂ ಕೆಲಸಕ್ಕಾಗಿ ಬರುವ ಸಾರ್ವಜನಿಕರು ತಮ್ಮ ಕೆಲಸದ ನಂತರ ನೆಮ್ಮದಿಯಿಂದ ಹಿಂದಿರುಗುವಂತೆ ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ತಮ ಸೇವೆ ನೀಡಿ ಮಾನವೀಯತೆ ಮೆರೆಯುವಂತೆ ಅವರು ನೌಕರರಿಗೆ ಸೂಚಿಸಿದರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಮಾತನಾಡಿ, ಜೀವಮಾನವಿಡೀ ತಮ್ಮ ಅಮೂಲ್ಯ ಸಮಯವನ್ನು ಕಚೇರಿಯಲ್ಲಿಯೇ ಕಳೆದು ನಿವೃತ್ತರಾಗುವ ನೌಕರರ ಬದುಕು ಕೂಡ ಹಸನಾಗಬೇಕು. ಅವರು ತಮ್ಮ ನಿವೃತ್ತಿಯ ಜೀವನವನ್ನು ನೆಮ್ಮದಿಯಿಂದ ಕಳೆಯುವಂತಾಗಬೇಕು. ಅದಕ್ಕಾಗಿ ಸರ್ಕಾರವು ಘೋಷಿಸಿ, ಅನುಷ್ಠಾನಕ್ಕೆ ತಂದಿರುವ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸಿ, ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮುಂದುವರೆಸಲು ಎಲ್ಲಾ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡರು ಮಾತನಾಡಿದರು. ಈ ಸಂದರ್ಭದಲ್ಲಿ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಡಿ.ಎಸ್.ಅರುಣ್, ಸೂಡಾ ಅಧ್ಯಕ್ಷ ಎಸ್.ಜ್ಯೋತಿ ಪ್ರಕಾಶ್, ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಶ್ರೀಮತಿ ಜಿ.ಅನುರಾಧ, ಸೂಡಾ ಆಯುಕ್ತ ಎಂ.ಕರಭೀಮಣ್ಣನವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ, ಡಾ. ನಾಗರಾಜ ನಾಯ್ಕ್, ರಾಜ್ಯ ಸಂಘದ ಕಾರ್ಯದರ್ಶಿ ಜಗದೀಶ ಗೌಡಪ್ಪ ಪಾಟೀಲ, ಕೋಶಾಧ್ಯಕ್ಷ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಎಂ.ಪಿ.ಎಲ್. ಸ್ಪೋಟ್ರ್ಸ್ ಫೌಂಡೇಶನ್, ಕೋವಿಡ್ ಸಹಯೋಗ್, ಪಿ.ಇ.ಎಸ್. ಟ್ರಸ್ಟ್, ಸ್ಪರ್ಶ ಹಾಸ್ಪಿಟಲ್, ಯುನೈಟೆಡ್‍ವೇ ಬೆಂಗಳೂರು, ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಲಸಿಕಾ ಅಭಿಯಾನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರು ಚಾಲನೆ ನೀಡಿದರು. ಅಂತೆಯೇ ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯದಲ್ಲಿಯೇ ಮೊದಲ ಬಾರಿಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿರುವ ಒ.ಎಂ.ಆರ್. ಶೀಟ್‍ನ್ನು ಸಂಸದ ಬಿ.ವೈ.ರಾಘವೇಂದ್ರ ಹಾಗೂ ಗಣ್ಯರು ಬಿಡುಗಡೆಗೊಳಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: