ಮೈಸೂರು

ಕಲಾವಿದರಿಂದ ಮೈಸೂರು ವಿಶ್ವ ನಕ್ಷೆಯಲ್ಲಿ ಸ್ಥಾನ ಪಡೆದಿದೆ: ಡಿ. ರಂದೀಪ್

ಸಾಂಸ್ಕೃತಿಕ ನಗರಿ ಮೈಸೂರು ವಿಶ್ವ ನಕ್ಷೆಯಲ್ಲಿ ಸ್ಥಾನ ಪಡೆದಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಕಲಾವಿದರು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಅಭಿಪ್ರಾಯಪಟ್ಟರು.

ಗುರುವಾರ ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಜಿಲ್ಲಾ ವೃತ್ತಿ ಮತ್ತು ಹವ್ಯಾಸಿ ರಂಗಕರ್ಮಿಗಳ ವೇದಿಕೆ ಹಾಗೂ ಮೈಸೂರು ನಗರ ಕಲಾವಿದರ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ನಾರಾಯಣ ಹೃದಯಾಲಯ ಹಾಗೂ ಭಗವಾನ್ ಮಹಾವೀರ ದರ್ಶನ ಕಣ್ಣಿನ
ಆಸ್ಪತ್ರೆ ವತಿಯಿಂದ ಕಲಾವಿದರು ಹಾಗೂ ಸಾಹಿತಿಗಳಿಗೆ ಆಯೋಜಿಸಿದ್ದ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಲಾವಿದರಿಲ್ಲದೇ ಸಂಸ್ಕೃತಿಯೇ ಇಲ್ಲ. ನಮ್ಮ ಆಚಾರ-ವಿಚಾರ, ಕಲೆ ಸಂಸ್ಕೃತಿಯ ಅಸ್ತಿತ್ವ ನಿಂತಿರುವುದೇ ಕಲಾವಿದರಿಂದ. ಕಲೆಗೆ ತಮ್ಮ ಜೀವನವನ್ನೇ ಮುಡಿಪಾಗಿಡುವ ಕಲಾವಿದರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಇದರಿಂದ ಅವರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಆರೋಗ್ಯದ ದೃಷ್ಟಿಯಿಂದ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಪ್ರತಿಯೊಬ್ಬರು ಸಮಸ್ಯೆ ಇರಲಿ, ಇಲ್ಲದಿರಲಿ ತಪಾಸಣೆ ಮಾಡಿಸಿಕೊಂಡು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ. ಆ ಮೂಲಕ ನಮ್ಮ ಭವ್ಯ ಸಂಸ್ಕೃತಿಗೆ ಮತ್ತಷ್ಟು ಸೇವೆ ನೀಡಿ ಎಂದು ಹೇಳಿದರು.

ಶಿಬಿರವನ್ನು ರಾಜ್ಯಪ್ರಶಸ್ತಿ ಪುರಸ್ಕೃತ ವಿಜೇತ ಕಲಾವಿದೆ ಬನ್ನೂರು ಕೆಂಪಮ್ಮ ಜಾನಪದ ಹಾಡು ಹಾಡುವ ಮೂಲಕ ಉದ್ಘಾಟಿಸಿದರು. ನೂರಾರು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಾರ್ಯಕ್ರಮದಲ್ಲಿ ನಾರಾಯಣ ಹೃದಯಾಲಯದ ಡೆಪ್ಯುಟಿ ಜನರಲ್ ಮ್ಯಾನೇಜರ್ ಅಶೋಕ್, ಭಗವಾನ್ ಮಹಾವೀರ್ ಕಣ್ಣಿನ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಭರತ್‍ ಕುಮಾರ್, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಬಿ.ಎಂ.ರಾಮಚಂದ್ರ, ಹಿರಿಯ ರಂಗಕರ್ಮಿ ಜನಾರ್ಧನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ, ಕಂಸಾಳೆ ಕುಮಾರಸ್ವಾಮಿ, ಡಾ.ಎಂ.ಎನ್.ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ಬಿ.ಎಂ-ಎಲ್.ಜಿ)

Leave a Reply

comments

Related Articles

error: