ಮೈಸೂರು

ಬೇರೆಯವರಿಗೆ ಸೇರಿದ ಭೂಮಿಯ ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ರೂ.ವಂಚನೆ : 6ಮಂದಿಯ ಬಂಧನ

ಮೈಸೂರು,ಜು.9:-  ಬೇರೆಯವರಿಗೆ ಸೇರಿದ ಭೂಮಿಯನ್ನು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಾರಾಟ ಮಾಡಿ, ಕೋಟ್ಯಂತರ ರೂಪಾಯಿ ಬ್ಯಾಂಕ್‌ ಸಾಲ ಪಡೆದು ವಂಚಿಸಿದ 6 ಮಂದಿಯನ್ನು ಅಶೋಕಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಯೋಗೇಶ್, ಮಂಜು, ಮಹಾಲಿಂಗ, ರಾಜೇಶ್ವರಿ, ಭಾಗ್ಯಮ್ಮ, ಮತ್ತು ಕಾಶಿರೆಡ್ಡಿ ವೇದಾವತಿ ಎಂದು ಗುರುತಿಸಲಾಗಿದೆ.

ಶ್ರೀರಾಂಪುರದ ನಿವಾಸಿಗಳಾದ ಶ್ಯಾಮಲಾ ಮತ್ತು ಇಂದ್ರಮ್ಮ ಎಂಬುವವರಿಗೆ ಸೇರಿದ ಶ್ರೀರಾಂಪುರದ 4.36 ಎಕರೆ ಜಮೀನು ಮಹೇಶ್‌ ಎಂಬವರಿಗೆ ‘ಜಿಪಿಎ’ ಆಗಿತ್ತು. ಇವರಲ್ಲಿ 2018ರಲ್ಲಿ ಇಂದ್ರಮ್ಮ ಎಂಬವರು ಮೃತಪಟ್ಟಿದ್ದರು. ಈ ಮಾಹಿತಿ ತಿಳಿದ ಮಹಾಲಿಂಗ ಎಂಬಾತ  ಯೋಗೇಶ್ ಮತ್ತು ಮಂಜು ಅವರಿಗೆ ಈ ಕುರಿತ ದಾಖಲಾತಿಗಳನ್ನು ನೀಡಿ ನಕಲಿ ದಾಖಲೆಗಳನ್ನು ಸೃಷ್ಟಿಸುವ ಸಂಚು ನಡೆಸಿ ರಾಜೇಶ್ವರಿ ಹಾಗೂ ಭಾಗ್ಯಮ್ಮ ಎಂಬ ಮಹಿಳೆಯರನ್ನು ಅಸಲಿ ಮಾಲೀಕರಾದ ಶ್ಯಾಮಲಾ ಹಾಗೂ ಇಂದ್ರಮ್ಮ ಅವರೆಂದು ಬಿಂಬಿಸಿ, ಅವರ ಹೆಸರಿನಲ್ಲಿ ಪಾನ್‌ ಕಾರ್ಡ್, ಆಧಾರ್ ಕಾರ್ಡ್‌ ಮತ್ತು ಇತರೆ ದಾಖಲಾತಿಗಳನ್ನು ಸೃಷ್ಟಿಸಿದ್ದ. ನಂತರ  ಈ ಜಮೀನನನ್ನು ಹಲವು ಮಂದಿಗೆ ಮಾರಾಟ ಕೂಡ ಮಾಡಿದ್ದ. ಜತೆಗೆ, ಆಂಧ್ರಪ್ರದೇಶದ ಕಡೂರಿನ ವಸುಮತಮ್ಮ ಮತ್ತು ಕಾಶಿರೆಡ್ಡಿ, ವೇದಾವತಿ ಎಂಬವರೊಂದಿಗೆ ಎಸ್‌ಬಿಐ ನೆಲ್ಲೂರು ಶಾಖೆಯಲ್ಲಿ ಒಟ್ಟು   4 ಕೋಟಿ ರೂ. ಸಾಲ ಪಡೆದುಕೊಂಡಿದ್ದ.

ಆತ ಸಾಲ ಮರುಪಾವತಿಸದೇ ಇದ್ದಾಗ ಮೂಲ ‘ಜಿಪಿಎ’ ಹೊಂದಿದ್ದ ಮಹೇಶ್‌  ಗೆ ಬ್ಯಾಂಕಿನಿಂದ ನೋಟಿಸ್ ಬಂದಿದ್ದು, ಆಗ ಬೆಚ್ಚಿಬಿದ್ದ  ಮಹೇಶ್ ಅಶೋಕಪುರಂ ಠಾಣೆಗೆ ದೂರು ನೀಡಿದ್ದರು.

ಕೃಷ್ಣರಾಜ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ ಅವರು ಪ್ರಕರಣದ ತನಿಖೆಯ ಹೊಣೆಯನ್ನು ಇನ್ಸ್ಪೆಕ್ಟರ್ ಬಿ.ಎಸ್.ಪ್ರಕಾಶ್ ಅವರಿಗೆ ವಹಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಆಂಧ್ರಪ್ರದೇಶಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆ ತಂಡದಲ್ಲಿ ಮಹದೇವಯ್ಯ, ಆನಂದ್, ರಾಘವೇಂದ್ರ, ಶಿವಪ್ರಕಾಶ್, ಮಹೇಶ್, ಸಂದೀಪ್, ನಿತೀಶ್, ಶೈಲಾಜು, ವಸಂತ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: