ಮೈಸೂರು

ಶೈಕ್ಷಣಿಕ ಗೊಂದಲಗಳ ನಿವಾರಣೆಗಾಗಿ ರಾಜ್ಯಾದ್ಯಂತ ಆಮ್ ಆದ್ಮಿ ಪಕ್ಷದಿಂದ ಸಹಿ ಸಂಗ್ರಹಣೆ,ಬೃಹತ್ ಜನಜಾಗೃತಿ

ಮೈಸೂರು,ಜು.9:- ಶೈಕ್ಷಣಿಕ ಗೊಂದಲಗಳ ನಿವಾರಣೆಗಾಗಿ ರಾಜ್ಯಾದ್ಯಂತ ಆಮ್ ಆದ್ಮಿ ಪಕ್ಷದಿಂದ ಸಹಿ ಸಂಗ್ರಹಣೆ ಹಾಗೂ ಬೃಹತ್ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಮೈಸೂರು ಜಿಲ್ಲಾ ಸಂಚಾಲಕಿ ಮಾಲವಿಕ ಗುಬ್ಬಿವಾಣಿ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಹೆಚ್ಚಿಸಿರುವ ಶೈಕ್ಷಣಿಕ ಶುಲ್ಕ, ಸರ್ಕಾರಿ ಶಾಲೆಗಳ ದುರವಸ್ಥೆ, ಖಾಸಗಿ ಶಿಕ್ಷಕರ ಸಮಸ್ಯೆ, ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಸೇರಿದಂತೆ ಹಲವಾರು ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರವು ಸಂಪೂರ್ಣ ವೈಫಲ್ಯಗೊಂಡಿದೆ. ಸರ್ಕಾರದ ಹೊಣೆಗೇಡಿತನದ ಪರಿಣಾಮವಾಗಿ ಇಂದು ರಾಜ್ಯದಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ವ್ಯವಸ್ಥೆ ಸಾಕಷ್ಟು ಸಂಕಷ್ಟಕ್ಕೀಡಾಗಿದೆ. ಶಾಲಾ ಶುಲ್ಕಗಳ ವಿಚಾರದಲ್ಲಿಯೂ ಸಹ ಪೋಷಕ ವರ್ಗ ಸಮಸ್ಯೆಗೀಡಾಗಿದೆ. ಈ ಎಲ್ಲಾ ಗೊಂದಲಗಳಿಂದಾಗಿ ಲಕ್ಷಾಂತರ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆಂದು ಆರೋಪಿಸಿದರು.

ಸರ್ಕಾರದ ಈ ಎಲ್ಲಾ ವೈಫಲ್ಯಗಳನ್ನು ಬಗೆಹರಿಸಲು ಒತ್ತಾಯಿಸುವ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷದ ನೂರಾರು ಕಾರ್ಯಕರ್ತರು ಸತತ 15ದಿನಗಳ ಕಾಲ ರಾಜ್ಯಾದ್ಯಂತ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಕನಿಷ್ಠ (ಒಟ್ಟು)5ಲಕ್ಷ ಮನೆಗಳಿಗೆ ತೆರಳಿ ಸಹಿ ಸಂಗ್ರಹಣೆ ಹಾಗೂ ಬೃಹತ್ ಆಂದೋಲನ ಕಾರ್ಯಕ್ರಮವನ್ನು ನಡೆಸುವವರಿದ್ದಾರೆ. ಕರಪತ್ರ, ಎಲ್ ಇಡಿ ವಾಹನ, ವಿಚಾರಗೋಷ್ಠಿಗಳು, ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಈ ಅಭಿಯಾನವನ್ನು ಯಶಸ್ವಿಯಾಗಿಸಲು ಈಗಾಗಲೇ ಹಲವು ರೂಪುರೇಷೆಗಳನ್ನು ಪಕ್ಷವು ಕೈಗೊಂಡಿದೆ. ಈ ಬೃಹತ್ ಅಭಿಯಾನದ ಭಾಗವಾಗಿ ಪಕ್ಷದ ರಾಜ್ಯಾಧ್ಯಕ್ಷರಾದ ಫೃಥ್ವಿರೆಡ್ಡಿಯವರು ಬೆಂಗಳೂರು ನಗರದ ಸಂಪಂಗಿ ರಾಮನಗರ ವಾರ್ಡ್ ನಲ್ಲಿ ಮನೆಮನೆಗೆ ತೆರಳಿ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಇದೇ ಸಮಯದಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಹ ಅಭಿಯಾನಕ್ಕೆ ಚಾಲನೆ ದೊರಕಿದೆ. ಈ ಮೂಲಕ ರಾಜ್ಯದಲ್ಲಿ ತಲೆದೋರಿರುವ ಶೈಕ್ಷಣಿಕ ಸಮಸ್ಯೆಗೆ ಆಮ್ ಆದ್ಮಿ ಪಕ್ಷವು ರಾಜ್ಯದ ಜನತೆಯ ಧ್ವನಿಯಾಗಿ ಕೆಲಸ ಮಾಡುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ  ಜಿಲ್ಲಾ ಮಾಧ್ಯಮ ಸಂಯೋಜಕ ಜಿ.ಆರ್.ವಿದ್ಯಾರಣ್ಯ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: