ಮೈಸೂರು

 ಗೃಹ ಕಾರ್ಮಿಕರ ಉದ್ಯೋಗ ದೃಢೀಕರಣ ಪತ್ರದಲ್ಲಿ ದಿಢೀರನೆ ಬದಲಾವಣೆ : ವಿರೋಧಿಸಿ ಪ್ರತಿಭಟನೆ

ಮೈಸೂರು,ಜು.9:-  ಗೃಹ ಕಾರ್ಮಿಕರ ಉದ್ಯೋಗ ದೃಢೀಕರಣ ಪತ್ರದಲ್ಲಿ ದಿಢೀರನೆ ಬದಲಾವಣೆ ಬಂದಿರುವುದನ್ನು ವಿರೋಧಿಸಿ  ಎಐಟಿಯುಸಿ ನೇತೃತ್ವದಲ್ಲಿ ಗೃಹ ಕಾರ್ಮಿಕರ   ಪ್ರತಿಭಟನೆ ನಡೆಯಿತು.

ಇಂದು ಮೈಸೂರಿನ ಕಾರ್ಮಿಕ ಇಲಾಖೆ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು    ಎಐಟಿಯುಸಿ ಮುಖಂಡರಾದ ಸಂಧ್ಯಾ ಮಾತನಾಡಿ  ಕರ್ನಾಟಕ ಸರ್ಕಾರ ತನ್ನ ಸೇವಾ ಸಿಂಧು ಯೋಜನೆ ಯಡಿ ಗೃಹ ಕಾರ್ಮಿಕರಿಗೆ ಕೋವಿಡ್ ಲಾಕ್ಡೌನ್ ಪರಿಹಾರ   2000 ರೂ.ನ್ನು  ಘೋಷಿಸಿತ್ತು. ಇದುವರೆಗೆ ಗೃಹ ಕಾರ್ಮಿಕರು ಪಾಸ್ ಪೋರ್ಟ್ ಫೋಟೋ, ಬಿ.ಪಿ.ಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು ಹಾಗೂ ಉದ್ಯೋಗ ದೃಢೀಕರಣ ಪತ್ರಕ್ಕೆ ಓರ್ವ ಗೆಜೆಟೆಡ್ ಆಫೀಸರ್ ನ ಸಹಿ ಹಾಕಿಸಿ ಸೇವಾಸಿಂಧು ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಿದ್ದರೆ ಸಾಕಾಗುತ್ತಿತ್ತು. ಇಲ್ಲಿಯವರೆಗೆ ಈ ರೀತಿ ಅಪ್ಲೋಡ್ ಮಾಡಿದವರ ಸಂಖ್ಯೆ ಕೇವಲ 1.4 ಲಕ್ಷ ಗೃಹ ಕಾರ್ಮಿಕರು. ಆದರೆ ಒಟ್ಟಾರೆ ಕರ್ನಾಟಕದಲ್ಲಿ 10 ಲಕ್ಷ  ಗೃಹ ಕಾರ್ಮಿಕರಿದ್ದಾರೆ ಎಂಬುದಾಗಿ ಅಂದಾಜಿಸಲಾಗಿದೆ.

ಕಳೆದ ವಾರ ಹೈಕೋರ್ಟ್ ವಿಚಾರಣೆಯ ನಂತರ ರಾಜ್ಯ ಸರಕಾರವು ಈ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಗೆಜೆಟೆಡ್ ಆಫೀಸರ್ ಸಹಿ ಬದಲಾಗಿ ಉದ್ಯೋಗದಾತರ ಪಾನ್ ಕಾರ್ಡ್/ಆಧಾರ್ ಕಾರ್ಡ್/ಇನ್ನಿತರ ವಿವರಗಳನ್ನು ನೀಡಿ ಗೃಹಕಾರ್ಮಿಕರ ಉದ್ಯೋಗ ದೃಢೀಕರಣ ಪತ್ರಕ್ಕೆ ಸಹಿ ಹಾಕಬೇಕಾಗುತ್ತದೆ ಎಂಬುದಾಗಿ ನವೀಕೃತ ಉದ್ಯೋಗ ದೃಢೀಕರಣ ಪತ್ರ ಹೊರಡಿಸಿದೆ. ಇದೀಗ ಅರ್ಜಿ ಸಲ್ಲಿಸಲು ಅತ್ಯಂತ ಕಡಿಮೆ ಸಮಯ ಅವಕಾಶವಿದ್ದು ದಿಢೀರನೆ ಉದ್ಯೋಗ ದೃಢೀಕರಣ ಪತ್ರದ ಸ್ವರೂಪವನ್ನು ಬದಲಾಯಿಸಿರುವುದು. ಅನೇಕ ಗೃಹ ಕಾರ್ಮಿಕರನ್ನು ಪರಿಹಾರ ಧನದಿಂದ ವಂಚಿತರನ್ನಾಗಿಸುತ್ತದೆ.  ಆದ್ದರಿಂದ ಹಳೆಯ ನಮೂನೆಯನ್ನು ಮತ್ತೆ ಚಾಲ್ತಿಗೆ ತಂದು ಈಗ ಹೊರಡಿಸಿರುವ ಹೊಸ ಆದೇಶವನ್ನು ಹಿಂಪಡೆಯಬೇಕೆಂದು   ಎಐಯುಟಿಯುಸಿ  ಮೈಸೂರು ಜಿಲ್ಲಾ ಸಮಿತಿಯು ಗೃಹ ಕಾರ್ಮಿಕರ ಪರವಾಗಿ ಒತ್ತಾಯಿಸುತ್ತೇವೆ ಎಂದರು.

ಸೇವಾ ಸಿಂಧು ಪೋರ್ಟಲ್ ಬಳಸುವಾಗ ಪದೇಪದೇ ಸರ್ವರ್ ಸಮಸ್ಯೆ ಎದುರಾಗುತ್ತಿದ್ದು, ವಿಫಲವಾದಾಗ ಪ್ರತಿಬಾರಿಯೂ ಅರ್ಜಿಯನ್ನು ಮತ್ತೆ ಭರ್ತಿ ಮಾಡಬೇಕಾಗುತ್ತದೆ. ಅಪ್ಲೋಡ್ ಮಾಡುವ ಕಾರ್ಯ ತುಂಬಾ ತಡವಾಗುತ್ತಿದೆ. ಈ ತಾಂತ್ರಿಕ ದೋಷವನ್ನು ಈ ಕೂಡಲೇ ಬಗೆಹರಿಸಬೇಕು. ಅನೇಕ ಗೃಹಕಾರ್ಮಿಕರು ಪಡಿತರ ಚೀಟಿಗಳಿಗೆ ಅರ್ಜಿಯನ್ನು ಸಲ್ಲಿಸಿದ ಸ್ವೀಕೃತಿ ಪ್ರತಿಗಳನ್ನು ಮಾತ್ರ ಹೊಂದಿದ್ದಾರೆ. ಪಡಿತರ ಚೀಟಿಗಳಿಗೆ ಬದಲಾಗಿ ಇದನ್ನೂ ಸ್ವೀಕರಿಸಬೇಕು. ಹೊಸ ಉದ್ಯೋಗ ದೃಢೀಕರಣ ಪತ್ರದ ಆದೇಶವನ್ನು ಹಿಂಪಡೆದು ಹಳೆಯ ಉದ್ಯೋಗ ದೃಢೀಕರಣ ಪತ್ರದ ನಮೂನೆಯನ್ನು ಜಾರಿಗೊಳಿಸಬೇಕು. ಗೃಹಕಾರ್ಮಿಕರ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಸುಲಭವಾಗಿ ಅಪ್ಲೋಡ್ ಮಾಡುವಂತೆ ಮಾಡಬೇಕು. ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಗೃಹ ಕಾರ್ಮಿಕರ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಈ ಕೂಡಲೇ ಕೋವಿಡ್ ಪರಿಹಾರ ಧನ ವಿತರಿಸಬೇಕು ಎಂದು ಒತ್ತಾಯಿಸಿದರು.

ಎಐಯುಟಿಯುಸಿ ಮುಖಂಡರಾದ  ಅಸಿಯಾ ಬೇಗಮ್ ,ಸುನಿಲ್ ಟಿ ಆರ್,ಗಣೇಶ್ ಹಾಗೂ ಗೃಹ ಕಾರ್ಮಿಕರಾದ ಗೌರಮ್ಮ, ಭಾಗ್ಯಮ್ಮ, ಪುಷ್ಪಲತಾ, ವಿಜಯ ,ಶಾಂತಕುಮಾರಿ ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: