ಕರ್ನಾಟಕಪ್ರಮುಖ ಸುದ್ದಿ

 ದಾವಣಗೆರೆಯಲ್ಲಿ ವಿವಿಧ ಕ್ಷೇತ್ರಗಳ ಕೈಗಾರಿಕೆಗಳಿಗೆ 2500 ಎಕರೆ ಭೂಮಿ ಗುರುತಿಸಲು ಸಂಸದರ ಸಲಹೆ

ರಾಜ್ಯ(ದಾವಣಗೆರೆ), ಜು.10:- ಜಿಲ್ಲೆಯಲ್ಲಿ ಉದ್ಯಮಿಗಳಿಗೆ, ಪ್ರತಿಷ್ಠಿತ ಕಂಪನಿಗಳಿಗೆ ಆಹ್ವಾನ ನೀಡಲಾಗಿದ್ದು, ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಿಗಳಿಗೆ ಭೂಮಿ, ನೀರು, ವಿದ್ಯುತ್ ಮತ್ತಿತರ ಮೂಲಸೌಕರ್ಯಗಳನ್ನು ನೀಡಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ  ಹೇಳಿದರು.

ದಾವಣಗೆರೆ ಜಿಲ್ಲೆಯಲ್ಲಿ ಉದ್ಯಮಿಗಳಿಂದ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಕುರಿತಂತೆ ಜಿಎಂಐಟಿ ಸಭಾಂಗಣದಲ್ಲಿ   ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗಾಗಿ ಎರಡರಿಂದ ಮೂರು ಸಾವಿರ ಎಕರೆ ಜಮೀನನ್ನು ಗುರುತಿಸಿ ಕಾಯ್ದಿರಿಸಬೇಕು. ಆಸಕ್ತಿಯಿಂದ ಉದ್ಯಮ ಸ್ಥಾಪಿಸಲು ಯಾರು ಮುಂದೆ ಬರುತ್ತಾರೋ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಜಮೀನನ್ನು ನಿಯಮಾನುಸಾರ ನೀಡಲಾಗುತ್ತದೆ ಎಂದರು.

ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ಐಟಿ ಕ್ಷೇತ್ರ ಸೇರಿದಂತೆ ಯಾವುದೇ ಕೈಗಾರಿಕೆ ಉದ್ಯಮಿಗಳು ವಿಮಾನ ನಿಲ್ದಾಣವನ್ನೆ ಮೊದಲು ಕೇಳುತ್ತಾರೆ. ಈಗಾಗಲೆ ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣ ಮಾಡಲು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಕೆಲವರು ಅಭಿವೃದ್ಧಿ ವಿಷಯದಲ್ಲಿ ಅಡ್ಡಿಯುಂಟು ಮಾಡುವವರೂ ಇದ್ದಾರೆ. ಏನೇ ಆದರೂ ವಿಮಾನ ನಿಲ್ದಾಣ ಮಾಡಿಯೇ ಮಾಡುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಈಗಾಗಲೆ ವಿಮಾನ ನಿಲ್ದಾಣಕ್ಕೆ 500 ಎಕರೆ ಭೂಮಿ ಗುರುತಿಸಿ, ಕಾಯ್ದಿರಿಸಿದ್ದೇವೆ ಎಂದರು.

ಸುಮ್ಮನೇ ಪದವಿಗಳನ್ನು ಪಡೆದರೆ ಸಾಲದು. ಇಂಜಿನಿಯರಿಂಗ್, ಮೆಡಿಕಲ್ ವಿದ್ಯಾಭ್ಯಾಸ ಮುಗಿಸಿ ಇನ್ಯಾವುದೋ ಕ್ಷೇತ್ರದಲ್ಲಿ ದುಡಿಯುವುದಾದರೇ ಅಷ್ಟು ಕಷ್ಟ ಪಟ್ಟು ಓದುವ ಅವಶ್ಯವಿರುವುದಿಲ್ಲ. ಯುವಕರಿಗೆ ಓದಿಗೆ ತಕ್ಕ ಉದ್ಯೋಗ ಸಿಗಬೇಕು. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಬೇಕಾಗಿರುವ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತದೆ. ಹಾಗೂ ಯುವಕರು ಸ್ವಯಂ ಉದ್ಯೋಗಗಳನ್ನು ಮಾಡಬೇಕು ಎಂದರು.

ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳವನ್ನು ಅತಿ ಹೆಚ್ಚು ಬೆಳೆಯಲಾಗುತ್ತಿದ್ದು, ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆ ಸಂಶೋಧನಾ ಕೇಂದ್ರ ತೆರೆಯಲು ಈಗಾಗಲೆ ಐಸಿಆರ್ ನಿರ್ದೇಶಕರಿಗೆ ಪತ್ರ ಬರೆದು ಕೋರಲಾಗಿತ್ತು. ಅವರೂ ಕೂಡ ಸಂಶೋಧನಾ ಕೇಂದ್ರ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲಿಯೇ ಪ್ರಾರಂಭವಾಗುವ ನಿರೀಕ್ಷೆ ಇದೆ ಎಂದರು.

ದಾವಣಗೆರೆಗೆ ಇನ್ಫೋಸಿಸ್, ವಿಪ್ರೋ ತರುತ್ತೇವೆ ಎಂದರೆ ಸಾಧ್ಯವಾಗುವುದಿಲ್ಲ. ಜಿಲ್ಲೆಯಲ್ಲಿ ಬೇರೆ ಬೇರೆ ಎಜ್ಯುಕೇಷನಲ್ ಹಬ್ ತರುವುದರ ಮೂಲಕ ಅಭಿವೃದ್ಧಿ ಪಡಿಸಿದರೆ ಸಾಫ್ಟ್‍ವೇರ್ ಕಂಪನಿಗಳೇ ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಜಿಲ್ಲೆಯಲ್ಲಿ 2 ಸಾವಿರ ಎಕರೆಗೂ ಹೆಚ್ಚು ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿಯೇ ಗುರುತಿಸಿದ್ದು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಇದಕ್ಕೆ 850 ರಿಂದ 900 ಕೋಟಿ ಬೇಕಾಗುತ್ತದೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ಹಣ ಕೊಡುವುದು ಕಷ್ಟ. ಹೂಡಿಕೆದಾರರು ಮುಂದೆ ಬಂದರೆ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಜಾಗವನ್ನು ಕೊಡಲು ಸರ್ಕಾರ ಸಿದ್ಧವಾಗಿದೆ. ಅದರಲ್ಲಿ 500 ಎಕರೆ ವಿಮಾನ ನಿಲ್ದಾಣಕ್ಕಾಗಿ, 100-200 ಎಕರೆ ಕೈಗಾರಿಕೆಗಳಿಗೆ ಸೇರಿದಂತೆ ಉಳಿದ ಕ್ಷೇತ್ರಗಳಿಗೆ ಭೂಮಿ ಮೀಸಲಿರಿಸಲು ಉದ್ದೇಶಿಸಲಾಗಿದೆ.

ಹರಿಹರದಲ್ಲಿ ಒಂದು ಯೂರಿಯಾ ಕಾರ್ಖಾನೆ ಆಗಬೇಕೆಂದು ಮಾರ್ಕೆಟಿಂಗ್ ಫೆಡರೇಷನ್ ಅವರು ಲಿಖಿತ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು ಇದಕ್ಕಾಗಿ ಶೇ.10 ರಷ್ಟು ಮರು ಹೂಡಿಕೆ ಮಾಡಿದ್ದಾರೆ. ಇನ್ನೂ ಶೇ.90 ರಷ್ಟು ಉಮೇದುದಾರರನ್ನು ಕರೆತಂದು 6.30 ಸಾವಿರ ಕೋಟಿ ರೂ. ಅಲ್ಲಿ ಹೂಡಿಕೆ ಮಾಡಿ ಕಾರ್ಯ ಪ್ರಾರಂಭಿಸುತ್ತೇವೆ ಎಂದು ತಿಳಿಸಿದ್ದರು. ನಂತರ ಅವರು ಬರಲಿಲ್ಲ, ಕೋವಿಡ್ ಕಾರಣದಿಂದ ನಾವು ಸಭೆ ನಡೆಸಲು ಆಗಲಿಲ್ಲ. ಹೀಗೆ ಯಾವುದೇ ಯೋಜನೆಗಳನ್ನು ಹಮ್ಮಿಕೊಂಡರು ಬರೀ ಅಡಚಣೆಗಳೆ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಯದೇವ ಹೃದ್ರೋಗ ಉಪಕೇಂದ್ರ ಆಸ್ಪತ್ರೆ ಮಾಡಲು ಜಿಲ್ಲಾಸ್ಪತ್ರೆ ಆವರಣದಲ್ಲಿ ಭೂಮಿ ನಿಗದಿಪಡಿಸಿದ್ದು, ಶೀಘ್ರದಲ್ಲಿಯೇ ಶಂಕುಸ್ಥಾಪನೆ ನೆರವೇರಿಸುತ್ತೇವೆ. ಜಿಲ್ಲೆಗೆ ಮುಖ್ಯವಾಗಿ ಬೇಕಾಗಿರುವ 2500 ಎಕರೆ ಭೂಮಿ ನಿಗದಿಪಡಿಸಿಕೊಂಡು, ಜಮೀನಿಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದಾಗಿ ಸಚಿವರಾದ ಜಗದೀಶ್ ಶೆಟ್ಟರ್ ಬಳಿ ಚರ್ಚಿಸಿ ಅವರ ಸಲಹೆ ಸೂಚನೆ ಮೇರೆಗೆ, ಜಿಲ್ಲೆಯ ಅಧಿಕಾರಿಗಳ ತಂಡದ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಗೆ ಮೂಲಭೂತವಾಗಿ ಬೇಕಾಗಿರುವುದು ಭೂಮಿ, ನೀರು, ವಿದ್ಯುತ್. ಹಾಗೂ ಒಂದು ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ ಮುಖ್ಯವಾಗಿ ಜಮೀನು ಬೇಕು. ಈ ಕಾರಣದಿಂದ 3 ಸಾವಿರ ಎಕರೆ ಪ್ರದೇಶದವರೆಗೂ ವಿಸ್ತರಣೆ ಮಾಡುತ್ತಿದ್ದೇವೆ. ಇಲ್ಲಿ ನೀರಿನ ಸೌಲಭ್ಯವಾಗಲಿ ವಿದ್ಯುತ್‍ಚ್ಚಕ್ತಿಯಾಗಲೀ ತೊಂದರೆಯಿಲ್ಲ. ಇನ್ನೂ ಉದ್ಯಮಿಗಳಿಗೆ, ಪ್ರತಿಷ್ಠಿತ ಕಂಪನಿಗಳಿಗೆ ಆಹ್ವಾನ ನೀಡಲಾಗಿದ್ದು, ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಿಗಳೊಂದಿಗೆ ಒಪ್ಪಂದ ಮಾಡಿಕೊಂಡು, ಭೂಮಿ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ಉದ್ಯಮಿ ಶಿವಶಂಕರ್ ಮಾತನಾಡಿ, ದಾವಣಗೆರೆ ಜಿಲ್ಲೆ ರಾಜ್ಯದ ಹೃದಯ ಭಾಗವಾಗಿರುವುದರಿಂದ ಇಲ್ಲಿ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸಬೇಕು. ಹಾಗೂ ನಿರುದ್ಯೋಗದ ಸಮಸ್ಯೆಯನ್ನು ಹೋಗಲಾಡಿಸುವ ದೃಷ್ಟಿಕೋನದಿಂದ ಕನಿಷ್ಟ 10 ಸಾವಿರ ಉದ್ಯೋಗ ಸೃಜನೆ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇನ್ನೋರ್ವ ಉದ್ಯಮಿ ಶ್ರೀಧರ್ ಮಾತನಾಡಿ, ಜವಳಿ ಪರಂಪರೆಯನ್ನು ಕಾಪಾಡಲು ಈಗಾಗಲೇ ಬಳ್ಳಾರಿಯಲ್ಲಿ ಜವಳಿ ಮತ್ತು ರೆಡಿಮೇಡ್ ಗಾರ್ಮೆಂಟ್ ಕ್ಲಸ್ಟರ್ ಸ್ಥಾಪಿಸಲಾಗುತ್ತಿದೆ. ಅಂತೆಯೇ ಇಲ್ಲಿಯೂ ಕೂಡ ಗಾರ್ಮೆಂಟ್ ಪಾರ್ಕ್ ಅಭಿವೃದ್ಧಿ ಪಡಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಇನ್ನೂ ದಾವಣಗೆರೆ ಜಿಲ್ಲೆ ರಿಯಲ್ ಎಸ್ಟೆಸ್ಟ್ ನಲ್ಲಿ ಕಳೆದ 5 ವರ್ಷಗಳಲ್ಲಿ ಪ್ರಮುಖ ನಗರಗಳಾದ ಮುಂಬೈ ಮತ್ತು ಬೆಂಗಳೂರಿಗಿಂತಲೂ ಅತೀ ಹೆಚ್ಚಿನ ಬೆಳವಣಿಗೆಯನ್ನು ಕಂಡಿದೆ. ಇಂತಹ ನಗರದಲ್ಲಿ ಹೆಚ್ಚಿನ ಅಭಿವೃದ್ಧಿಯಾದರೆ ನಗರ ಬೆಳವಣಿಗೆಯೊಂದಿಗೆ ನಿರುದ್ಯೋಗದ ಸಮಸ್ಯೆಯು ಕ್ಷೀಣಿಸುತ್ತದೆ ಎಂದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ವೈ. ನಾರಾಯಣಸ್ವಾಮಿ, ಚಿದಾನಂದಗೌಡ, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿ.ಪಂ. ಸಿಇಓ ವಿಜಯ ಮಹಾಂತೇಶ್ ದಾನಮ್ಮನವರ್, ನಾಗರಾಜ್ ರೆಡ್ಡಿ, ಶಿಕ್ಷಣ ಕ್ಷೇತ್ರದ ಮುಖ್ಯಸ್ಥರಾದ ಶ್ರೀಧರ್, ನಾಗರಾಜ್ ಸೇರಿದಂತೆ ಸಂಸ್ಥೆಯ ಪ್ರತಿನಿಧಿಗಳು, ಕಾರ್ಪೋರೇಟರ್‍ಗಳು, ಹೂಡಿಕೆದಾರರು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: