
ಕರ್ನಾಟಕಪ್ರಮುಖ ಸುದ್ದಿ
ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ: ಸುಮಲತಾ ಅಂಬರೀಶ್, ರಾಕ್ಲೈನ್ ವೆಂಕಟೇಶ್ ಮನೆಗೆ ಪೊಲೀಸ್ ಭದ್ರತೆ
ಬೆಂಗಳೂರು,ಜು.10-ಸಂಸದೆ, ನಟಿ ಸುಮಲತಾ ಅಂಬರೀಶ್ ಹಾಗೂ ನಟ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರ ಮನೆಗೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಸುಮಲತಾ ಹಾಗೂ ರಾಕ್ಲೈನ್ ವೆಂಕಟೇಶ್ ಅವರು ನಿನ್ನೆ ಎಚ್.ಡಿ.ಕುಮಾರಸ್ವಾಮಿ ಕುರಿತಂತೆ ಹೇಳಿಕೆ ನೀಡಿದ್ದು, ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.
ಸುಮಲತಾ ಅವರ ಬೆಂಗಳೂರಿನ ಮನೆಯ ಬಳಿ ನಲವತ್ತಕ್ಕೂ ಹೆಚ್ಚು ಪೊಲೀಸರು, ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಮಹಾಲಕ್ಷ್ಮಿ ಲೇಔಟ್ನಲ್ಲಿರುವ ರಾಕ್ಲೈವ್ ವೆಂಕಟೇಶ್ ಮುಂದೆ ಪೊಲೀಸರು ಕಾವಲಿದ್ದಾರೆ. ರಾಕ್ಲೈವ್ ವೆಂಕಟೇಶ್ ಮನೆಗೆ ಹೋಗುವ ದಾರಿಯಲ್ಲಿ ಬ್ಯಾರಿಕೇಟ್ ಹಾಕಲಾಗಿದ್ದು, ವಾಹನಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ರಾಕ್ಲೈನ್ ಮನೆಯ ಬಳಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.
ರಾಕ್ಲೈವ್ ವೆಂಕಟೇಶ್ ನಿನ್ನೆ ಮಾಧ್ಯಮಗಳೊಟ್ಟಿಗೆ ಮಾತನಾಡಿ, ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿದ್ದೇ ಕುಮಾರಸ್ವಾಮಿ. ಅವರು ತಮ್ಮ ದುರ್ಬುದ್ಧಿಯನ್ನು ಬಿಡಬೇಕು. ಇಂಥಹಾ ಕುತಂತ್ರಗಳು ಹೆಚ್ಚು ದಿನ ನಡೆಯುವುದಿಲ್ಲ. ಅಂಬಿ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಬೇಕು ಎಂದಿದ್ದರು. ಅಷ್ಟೇ ಅಲ್ಲದೆ, ಕುಮಾರಸ್ವಾಮಿ ಬಹಳ ಕೀಳೂ ಮಟ್ಟದ ರಾಜಕೀಯ ಮಾಡಿದ್ದರು, ನನ್ನ ಹಾಗೂ ಸುಮಲತಾ ನಡುವೆ ಸಂಬಂಧ ಕಲ್ಪಿಸಲು ಯತ್ನಿಸಿದ್ದರು ಎಂಬ ಗಂಭೀರ ಆರೋಪ ಮಾಡಿದ್ದರು.
ಇದರಿಂದ ಕೋಪಗೊಂಡಿರುವ ಕುಮಾರಸ್ವಾಮಿ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ರಾಕ್ಲೈನ್ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ನಿವಾಸದ ಬಳಿ ಪ್ರತಿಭಟನೆ ನಡೆಸಿ ಕ್ಷಮೆ ಕೇಳುವಂತೆ ಬಿಗಿಪಟ್ಟು ಹಿಡಿದಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಮೊದಲೇ ಮುನ್ಸೂಚನೆ ಇದ್ದ ಕಾರಣ ರಾಕ್ಲೈನ್ ವೆಂಕಟೇಶ್ ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು. (ಎಂ.ಎನ್)