ದೇಶಪ್ರಮುಖ ಸುದ್ದಿ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್‌ ಅಧ್ಯಕ್ಷತೆಯಲ್ಲಿ ಇಂದು ಮೇಕೆದಾಟು ಯೋಜನೆ ಕುರಿತು ಸರ್ವಪಕ್ಷ ಸಭೆ

ದೇಶ( ಚೆನ್ನೈ)ಜು.12:- ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್‌ ಅಧ್ಯಕ್ಷತೆಯಲ್ಲಿ ಮೇಕೆದಾಟು ಯೋಜನೆ ಕುರಿತು ಮುಂದಿನ ಕಾರ್ಯತಂತ್ರ ರೂಪಿಸುವ ಕುರಿತು ಚರ್ಚಿಸಲು ಇಂದು ಸರ್ವಪಕ್ಷಗಳ ಸಭೆ ನಡೆಯಲಿದೆ.

ಈ ಯೋಜನೆಯನ್ನು ಮುಂದುವರಿಸಲು ಬದ್ಧವಾಗಿರುವುದಾಗಿ ಕರ್ನಾಟಕ ಘೋಷಿಸಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳ ಅಭಿಪ್ರಾಯ ಪಡೆಯಲು ಈ ಸಭೆ ಕರೆಯಲಾಗಿದೆ. ಜತೆಗೆ, ಕರ್ನಾಟಕದ ನಿರ್ಧಾರವನ್ನು ಖಂಡಿಸಿ ನಿರ್ಣಯವನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಯೋಜನೆ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ಸ್ಟ್ಯಾಲಿನ್‌ ಅವರು ಸಭೆಯಲ್ಲಿ ವಿವರಿಸಲಿದ್ದಾರೆ.

ತಮಿಳುನಾಡಿನ ಅನುಮತಿ ಇಲ್ಲದೆಯೇ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಕರ್ನಾಟಕಕ್ಕೆ ಅವಕಾಶ ಕಲ್ಪಿಸಬಾರದು. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ರಾಜಕೀಯ ಪಕ್ಷಗಳು ಒತ್ತಾಯಿಸುವ ಸಾಧ್ಯತೆ ಇದೆ. ಜತೆಗೆ, ಈ ವಿಷಯದ ಬಗ್ಗೆ ಪ್ರಧಾನಿ ಅವರ ಬಳಿ ಸರ್ವಪಕ್ಷಗಳ ನಿಯೋಗವನ್ನು ಕೊಂಡೊಯ್ಯಬೇಕು ಎಂದು ಎಐಎಡಿಎಂಕೆ ಒತ್ತಾಯಿಸಲಿದೆ.

ತಮಿಳುನಾಡು ಸರ್ಕಾರದ ಜಲಸಂಪನ್ಮೂಲ ಸಚಿವ ದುರೈ ಮುರುಗನ್ ಅವರು ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಇತ್ತೀಚೆಗೆ ದೆಹಲಿಯಲ್ಲಿ ಭೇಟಿಯಾಗಿ, ಮೇಕೆದಾಟು ಯೋಜನೆಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದರು. ಈ ಭೇಟಿಯ ಬಳಿಕ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: