ಮೈಸೂರು

ಕೆ.ಆರ್.ಆಸ್ಪತ್ರೆ ಅತ್ಯಾಚಾರ ಪ್ರಕರಣ ; ಪೊಲೀಸರಿಗೆ ಆರೋಪಿ ಪತ್ತೆ ಹಚ್ಚುವಿಕೆ ತಂದಿಟ್ಟ ತಲೆನೋವು ; ಕೆಟ್ಟು ನಿಂತಿವೆ ಸಿಸಿಕ್ಯಾಮರಾ

ಮೈಸೂರು,ಜು.12:- ಕೆ.ಆರ್.ಆಸ್ಪತ್ರೆಯ ವಾರ್ಡ್‌ನಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆ  ಹಚ್ಚುವುದೇ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.  ಅದಕ್ಕೆ ಕಾರಣವಿಷ್ಟೇ ಆಸ್ಪತ್ರೆಯ ಆವರಣದಲ್ಲಿ ಅಳವಡಿಸಿರುವ ಬಹುತೇಕ ಸಿಸಿ ಕ್ಯಾಮರಾ ಕೆಟ್ಟು ನಿಂತಿವೆ.

ಕಳೆದ ವಾರ ಕೆ.ಆರ್.ಆಸ್ಪತ್ರೆಯ ವಾರ್ಡ್ ಒಂದರಲ್ಲಿ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಘಟನೆ ನಡೆದ ವಾರ್ಡ್‌ನ ಸುತ್ತಮುತ್ತಲಿನ ಕಟ್ಟಡಗಳಲ್ಲಿ ಯಾವುದೇ ಸಿಸಿ ಕ್ಯಾಮರಾ ಅಳವಡಿಸಿಲ್ಲ. ಹೀಗಾಗಿ ಆರೋಪಿಯ ಪತ್ತೆ ಹೇಗೆ ಎಂಬುದರ ಕುರಿತು ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ.

ಕೆ.ಆರ್.ಆಸ್ಪತ್ರೆಯ ಮುಖ್ಯ ದ್ವಾರ, ಜಯದೇವ ಆಸ್ಪತ್ರೆ ಕಟ್ಟಡ ಸೇರಿದಂತೆ ವಿವಿಧೆಡೆ ಒಟ್ಟು 46 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸಿಸಿ ಟಿವಿ ನಿರ್ವಹಣೆ ಸರಿಯಿಲ್ಲದ ಕಾರಣ ಸಾಕಷ್ಟು ಸಿಸಿ ಕ್ಯಾಮರಾಗಳು ಹಾಳಾಗಿವೆ. ಹೀಗಾಗಿ ಪೊಲೀಸರಿಗೆ ಸದ್ಯಕ್ಕೆ ಆರೋಪಿಯ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ.

ಆದರೂ ಕೂಡ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸ್ವಚ್ಛತಾಗಾರರು, ದಾದಿಯರು ಮತ್ತಿತರರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಸಾಕಷ್ಟು ಮಾಹಿತಿಯನ್ನು ಕಲೆಹಾಕಿದ್ದಾರೆ. ಹೀಗಿದ್ದರೂ ಆರೋಪಿಯ ಬಗ್ಗೆ ಮಾತ್ರ ಯಾವುದೇ ಸುಳಿವು ದೊರಕಿಲ್ಲ.

ನೂರಾರು ಮಂದಿ ರೋಗಿಗಳು, ನೂರಾರು ಕೊಠಡಿಗಳಿರುವ ಕೆ.ಆರ್.ಆಸ್ಪತ್ರೆಗೆ ರಾತ್ರಿ ವೇಳೆ ಭದ್ರತೆಗೆಂದು ನಿಯೋಜಿತರಾಗಿರುವವರು 17 ಮಂದಿ ಮಾತ್ರ. ರಾತ್ರಿ 9 ಗಂಟೆಯಾಗುತ್ತಿದ್ದಂತೆ ಅವರುಗಳು ಎಲ್ಲಿರುತ್ತಾರೆ ಎಂಬುದು ಮಾತ್ರ ಯಾರಿಗೂ ತಿಳಿದಿರುವುದಿಲ್ಲ.

ರಾತ್ರಿ 8 ಗಂಟೆಯಾಗುತ್ತಿದ್ದಂತೆ ಕೆ.ಆರ್.ಆಸ್ಪತ್ರೆಯ ಮುಖ್ಯ ದ್ವಾರ, ಕಾಂತರಾಜೇ ಅರಸ್ ಕಟ್ಟಡ ದ್ವಾರ ಹಾಗೂ ಹಿಂಭಾಗದ ದ್ವಾರಗಳಲ್ಲಿ ಯಾರು ಬೇಕಾದರೂ ಬರಬಹುದು, ಹೋಗಬಹುದು. ಅಲ್ಲಿ ಭದ್ರತಾ ಸಿಬ್ಬಂದಿಗಳು ಕಾಣಸಿಗುವುದಿಲ್ಲ. ಹೀಗಾಗಿಯೇ ಅಪರಿಚಿತರು ಆಸ್ಪತ್ರೆಯ ಆವರಣದಲ್ಲಿ ಅನೈತಿಕ ಚಟುವಟಿಕೆ ನಡೆಸಲು ಕಾರಣವಾಗುತ್ತಿದೆ.

ಕಳೆದ 10 ವರ್ಷಗಳ ಹಿಂದೆ ಹೊರ ಗುತ್ತಿಗೆ ಆಧಾರದಲ್ಲಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು  ಇಷ್ಟು ದೊಡ್ಡ ಆಸ್ಪತ್ರೆಗೆ 17 ಮಂದಿ ಸಾಕಾಗಲ್ಲ. ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವಂತೆ ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ  ಎಂದು ಹೇಳುತ್ತಾರೆ.

ಸಿಸಿಕ್ಯಾಮರಾ ಕಾರ್ಯನಿರ್ವಹಿಸದ ಕಾರಣ ಆರೋಪಿ ಪತ್ತೆ ಇದೀಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: