ಮೈಸೂರು

ದೇಶವನ್ನು ತೈಲಕಂಪನಿಗಳಿಗೆ ಅಡವಿಟ್ಟಿದ್ದೀರಾ : ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿನ ನಡೆಸಿದ ಕೆ.ಟಿ.ಚಲುವೇಗೌಡ

ಮೈಸೂರು,ಜು.12:-  ತೈಲ ಬೆಲೆ ಏರಿಕೆಯನ್ನು ಖಂಡಿಸಿದ ಮೈಸೂರು ನಗರ (ಜಿಲ್ಲೆ) ಜನತಾದಳ(ಜಾತ್ಯಾತೀತ)  ನಗರ ಅಧ್ಯಕ್ಷ ಕೆ.ಟಿ.ಚಲುವೇಗೌಡ ದೇಶವನ್ನು ತೈಲಕಂಪನಿಗಳಿಗೆ ಅಡವಿಟ್ಟಿದ್ದೀರಾ ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದರು.

ಮೈಸೂರಿನಲ್ಲಿಂದು ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಈ ದೇಶದಲ್ಲಿ     ಬಿಜೆಪಿ ಪಕ್ಷ ಎರಡನೇ ಬಾರಿ ಅಧಿಕಾರಕ್ಕೆ ಬಂದು 7ವರ್ಷಗಳಾಗಿದೆ. 7ವರ್ಷಗಳಲ್ಲಿ ಸರ್ಕಾರ ನಡೆದು ಬಂದ ದಾರಿ ಎಲ್ಲರಿಗೂ ತಿಳಿದ ವಿಚಾರ. ಜನಸಾಮಾನ್ಯರಿಗೆ ಅಧಿಕಾರಕ್ಕೆ ಬರುವ ಮುನ್ನ ಯಾವೆಲ್ಲ ಅನುಕೂಲ ಮಾಡಿಕೊಡುತ್ತೇವೆಂದು ಘೋಷಣೆ ಮಾಡಿದ್ದರೋ, ಮಾಧ್ಯಮದವರ ಹೆಚ್ಚಿನ ಬೆಂಬಲ, ಯುವಕರ ಹೆಚ್ಚಿನ ಬೆಂಬಲ ಪಡೆದು ಯುವಕರಿಗೆ ಹೆಚ್ಚಿನ ಉದ್ಯೋಗ ನೀಡುವುದಾಗಿ ಘೋಷಿಸಿದ ಬಿಜೆಪಿ ಸರ್ಕಾರ  ಇಂದು ಯಾವ ರೀತಿಯಲ್ಲಿ ಅಧಿಕಾರ ನಡೆಸುತ್ತಿದೆ ಎಂದು ಪ್ರಶ್ನಿಸಿದರು.

ಕಳೆದ ಬಾರಿ ಇದೇ ರೀತಿ ಕೊರೋನಾ ಬಂದಾಗ ಕೊರೋನಾ ಸಮಯದಲ್ಲಿ  ಪ್ರಧಾನಿ ಮೋದಿಯವರು ಜನರನ್ನು ಕುರಿಗಳ ರೀತಿ ಉಪಯೋಗಿಸಿಕೊಂಡರು. ಒಂದು ಸಲ ತಟ್ಟೆಲೋಟ ಬಡಿಯಿರಿ, ಮತ್ತೊಂದು ಸಲ ಚಪ್ಪಾಳೆ ತಟ್ಟಿ, ಮತ್ತೊಂದು ಸಲ ಕ್ಯಾಂಡಲ್ ಹಚ್ಚಿ ಅಂತ ಹೇಳಿದ್ದರು. ಇದೆಲ್ಲವನ್ನೂ ಮಾಡಿಕೊಂಡು ಬಂದಿದ್ದೇವೆ.  ಇದೆಲ್ಲಮಾಡಿರುವ ಉದ್ದೇಶ ನಮ್ಮನ್ನು ಮರಳು ಮಾಡುವುದು, ನಮ್ಮನ್ನು ಗೊಂಬೆಗಳ ರೀತಿ ಮಾಡಿಕೊಂಡು ಆಟ ಆಡಿಸ್ತಿದ್ದಾರೆ. ಅವರು ಬಂದ ಮೇಲೆ ದೇಶದ ಪರಿಸ್ಥಿತಿ ಎಲ್ಲಿಗೆ ಹೋಗಿದೆ?. ಸಾಮಾನ್ಯ ಜನರಿಗೆ ಕೈಗೆಟುಕುವ ರೀತಿಯಲ್ಲಿ ಇದ್ಯಾ ಎಂದು ಪ್ರಶ್ನಿಸಿದರು.  ಗ್ಯಾಸ್ ಕಳೆದ ಸಾರಿ ಸಾರ್ವಜನಿಕರಿಗೆ ಫ್ರಿ ಗ್ಯಾಸ್ ಕೊಡುತ್ತೇನೆಂದು ಹೇಳಿ ಚಾಕಲೇಟ್ ನೀಡಿದಂತೆ ಒಂದೊಂದು ಸಿಲಿಂಡರ್ ಕೊಟ್ಟುಬಿಟ್ಟು ಇವತ್ತು   ದರ ಹೆಚ್ಚು ಮಾಡಿದ್ದಾರೆ. ಒಂದುಸಾವಿರದ ವರೆಗೆ ಮಾಡಿದ್ದಾರೆ.  ಬಡವರು ಅದನ್ನು ಕೊಂಡುಕೊಂಡು ಯಾವ ರೀತಿ ಅಡುಗೆ ಅನಿಲವನ್ನು   ಉಪಯೋಗಿಸಲು ಸಾಧ್ಯ?  ಬಡವರು ಇಂದು ಗ್ಯಾಸ್ ಇದ್ದರೂ ಉಪಯೋಗಿಸಲಾಗದೆ ಅದನ್ನು ಬದಿಗಿರಿಸಿ ಸೌದೆ ತಗೊಂಡು ಅಡುಗೆ ಮಾಡಿ ಊಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.    ಅಡುಗೆ ಎಣ್ಣೆ ಒಂದು ಲೀಟರ್ ಗೆ 150ರೂ.ಆಗಿದೆ. ಕೇವಲ 60,70ರೂ.ಗಳಿಗೆ ಸಿಗುತ್ತಿದ್ದ ಅಡುಗೆ ಎಣ್ಣೆ ಡಬ್ಬಲ್ ದರವಾಗಿದೆ ಅಂದರೆ ಜನಸಾಮಾನ್ಯರು ಈ ದೇಶದಲ್ಲಿ ಯಾವ ರೀತಿ ಬಾಳುವೆ ಮಾಡಲು ಸಾಧ್ಯ?   ನಿಮ್ಮನ್ನು ಅಧಿಕಾರಕ್ಕೆ ತಂದಿದ್ದು ಇದೇ ಉದ್ದೇಶಕ್ಕಾ? ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಇದ್ದಾಗ ಎಸ್ ಎಂ ಕೃಷ್ಣ ಅಧಿಕಾರದಲ್ಲಿದ್ದಾಗ ಈರುಳ್ಳಿ ಬೆಲೆ ಜಾಸ್ತಿ ಆಗಿತ್ತು. ಈರುಳ್ಳಿ ಬೆಲೆ ಜಾಸ್ತಿ ಆಗಲು ಕಾಂಗ್ರೆಸ್ ಸರ್ಕಾರ ಕಾರಣವಾಯಿತು. ಮೋದಿಯವರೇ ಇವತ್ತು ನೀವು ಏನಿವತ್ತು ತೈಲಬೆಲೆ, ಅಡುಗೆ ಅನಿಲ ಬೆಲೆ, ಪದಾರ್ಥಗಳ ಬೆಲೆಯನ್ನು ಏನು ಜಾಸ್ತಿ ಮಾಡುತ್ತಿದ್ದೀರೋ ನಿಮ್ಮ ಸರ್ಕಾರ ಮುಂದಿನ ದಿನಗಲ್ಲಿ ಉಳಿಯತ್ತಾ? ನಿಮ್ಮ ಸರ್ಕಾರ ಉಳಿಯಲು ಸಾಧ್ಯವೇ ಇಲ್ಲ. ಕೊರೋನಾ ಹೆಸರೇಳಿಕೊಂಡು ದೇಶವನ್ನು ಲೂಟಿಮಾಡುತ್ತಿದ್ದೀರಿ, ದೇಶವನ್ನು ಹಾಳು ಮಾಡುತ್ತಿದ್ದೀರಿ, ದೇಶವನ್ನು ರಾಜ್ಯವನ್ನು ಯಾವ ಮಟ್ಟಕ್ಕೆ ಕೊಂಡೊಯ್ದಿರಿ, ನಿಂತುಕೊಂಡು ನೋಡಿದರೆ ಏನು ಕಾಣಿಸಲ್ಲ ನಮಗೆ. ಖಾಲಿ ರೋಡ್ ಕಾಣಿಸತ್ತೆ, ಖಾಲಿ ಮನೆಗಳು ಕಾಣಿಸತ್ತೆ, ರೋಡಿನಲ್ಲಿ ಒಬ್ಬರು ತಿರುಗಾಡಿದ್ದು, ಕಾಣಿಸಲ್ಲ ಎಂದು ಹರಿಹಾಯ್ದರು.

ಆಕ್ಸಿಜನ್ ಕೊರತೆಯಿಂದ ಸತ್ತ ಜನರೆಷ್ಟು? ಆಕ್ಸಿಜನ್ ಸಿಗಲಿಲ್ಲ. ಕೊರತೆ ಉಂಟಾಯಿತು, ಕಳೆದ ಸಾರಿ ಒಂದು ಸಾವಿರ ಜನರಿಗೆ ಬೆಂಗಳೂರಿನಲ್ಲಿ ಬೆಡ್ ಮಾಡಿದ್ದೀರಿ,  6ತಿಂಗಳಿನಲ್ಲೇ ಬೆಡ್ ಇಲ್ಲ, ಹಾಸಿಗೆ ಇಲ್ಲ, ಮಂಚನೂ ಇಲ್ಲ.   ಹತ್ತು ಸಾವಿರ ಜನರಿಗೆ ಬೆಡ್ ಮಾಡುತ್ತೇವೆ ಅಂತ ಹೇಳಿ ಒಂದು  ಬೆಡ್ ಇಲ್ವಲ್ಲ ಎಲ್ಲಿ ಹೋಯಿತು?  ಇಂದು ಕರ್ನಾಟಕದಲ್ಲಿ ಯಡಿಯೂರಪ್ಪನವರಿಗೆ ಕುಳಿತುಕೊಂಡರೆ ಮೇಲಕ್ಕೆ ಎದ್ದುಕೊಳ್ಳಲಿಕ್ಕಾಗಲ್ಲ, ಮೇಲಕ್ಕೆ ಎದ್ದರೆ ಕುಳಿತುಕೊಳ್ಳಲಿಕ್ಕಾಗಲ್ಲ, ಅಂತಹವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ, ಯಡಿಯೂರಪ್ಪನವರನ್ನು ತೆಗೆದು ಹಾಕಿದರೆ ಲಿಂಗಾಯಿತರ ವೋಟುಗಳೇ ಸಿಗಲ್ಲ ಅಂತಿದ್ದಾರೆ.  ಜಾತಿ ರಾಜಕಾರಣ ಮಾಡಿ, ಯುವಕರನ್ನು ಮರಳು ಮಾಡಿ ಪಾಕಿಸ್ತಾನದಲ್ಲಿ ನಾನೇನು ಮಾಡುತ್ತೇನೆ. ಏನೋ ಮಾಡಿದೆ ಎಂದು ಸುಳ್ಳು ಸುಳ್ಳೇಳಿ, ಸುಳ್ಳು ರಾಜಕೀಯ ಮಾಡಿ ಈ ದೇಶವನ್ನು ಯಾವ ಸ್ಥಿತಿಗೆ ಕೊಂಡೊಯ್ದಿರಿ ಎಂದು ವಾಗ್ದಾಳಿ ನಡೆಸಿದರು.

ವಿರೋಧ ಪಕ್ಷಗಳು ನೆಟ್ಟಗೆ ಕೆಲಸ ಮಾಡುತ್ತಿಲ್ಲ.  ನಾನು ಸಿಎಂ ನಾನು ಸಿಎಂ ಅಂತ ಜನರಿಗೆ ಒಳ್ಳೆಯದು ಮಾಡಲು ಹೊರಟಿದ್ದೀರಾ? ಮುಖ್ಯಮಂತ್ರಿಯಾಗಲು ಹೊರಟಿದ್ದೀರ?   ಕೂಸುಹುಟ್ಟುವುದಕ್ಕೂ ಮುನ್ನ ಕುಲಾವಿ ಯಾಕೆ? ಅಧಿಕಾರಕ್ಕೋಸ್ಕರ ಮಾಡುತ್ತಾರಾ? ಏನು ಮಾಡುತ್ತಿದ್ದೀರಿ ನೀವು ಎಂದು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧವೂ ಹರಿಹಾಯ್ದರು.

ತೈಲ ಕಂಪನಿಗಳಿಗೆ ದೇಶವನ್ನು ಅಡವಿಟ್ಟಿದ್ದೀರಾ? ಏನು ಮಾಡಲು ಹೊರಟಿದ್ದೀರಿ, ಕಪ್ಪು ಹಣ ತರುತ್ತೇನೆಂದಿರಿ, ತಂದಿದ್ದೀರಾ? ಯಾವ ಉದ್ದೇಶಕ್ಕಾಗಿ ಜನ ಯಾಕೆ ನಿಮಗೆ ವೋಟು ಕೊಟ್ಟರು, ಈ ದೇಶ ಉದ್ಧಾರ ಮಾಡಲಿ ಅಂತ ಕೊಟ್ಟರು, ಆದರೆ ನೀವು ದೇಶವನ್ನು ಅಡವಿಟ್ಟುಬಿಟ್ಟಿದ್ದೀರಾ? ಈ ಆಡಳಿತಕ್ಕಿಂತ ಬ್ರಿಟಿಷ್ ಆಡಳಿತವೇ ಚೆನ್ನಾಗಿತ್ತು ಎಂದು ಜನರು ಮಾತಾಡಿಕೊಳ್ಳುವಂತೆ ಮಾಡಿದ್ದೀರಿ,   ಇನ್ನಾದರೂ ಜನಸಾಮಾನ್ಯರಿಗೆ ಅನುಕೂಲವಾಗುವ ಕೆಲಸ ಮಾಡಿ, ದೇಶವನ್ನು ಉಳಿಸಿ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಲಿಂಗಪ್ಪ, ಮಹಿಳಾಧ್ಯಕ್ಷರಾದ ಹೇಮಾ ಶಂಕರ್,  ಆರ್ ಮುದ್ದುರಾಜ್ ಸೇರಿದಂತೆ ಹಲವರು ಉಸಪ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: