ದೇಶಪ್ರಮುಖ ಸುದ್ದಿ

ಭಾರತಕ್ಕೆ ಅಪಾಯಕಾರಿ ಲಾಂಬ್ಡಾ ಸೋಂಕಿನ ಭೀತಿ

ನವದೆಹಲಿ,ಜು.12-ಕೊರೊನಾ ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿರುವ ಭಾರತಕ್ಕೀಗ ಅಪಾಯಕಾರಿ ಲಾಂಬ್ಡಾ ಸೋಂಕಿನ ಭೀತಿ ಎದುರಾಗಿದೆ. ಲಾಂಬ್ಡಾ ರೂಪಾಂತರಿಯೂ ಅಪ್ಪಳಿಸಲಿದೆ ಎಂದು ತಜ್ಞರು ಅಪಾಯದ ಮುನ್ಸೂಚನೆ ನೀಡಿದ್ದಾರೆ.

ಮೊದಲು ಪೆರು ದೇಶದಲ್ಲಿ ಪತ್ತೆಯಾದ ಲಾಂಬ್ಡಾ ರೂಪಾಂತರಿ ಈಗ 30 ರಾಷ್ಟ್ರಗಳಿಗೆ ಪಸರಿಸಿದೆ. ಇದು ‘ಡೆಲ್ಟಾಗಿಂತ ಮಾರಣಾಂತಿಕ’ ಎಂದು ಮಲೇಷ್ಯಾ ಘೋಷಿಸಿದೆ. ಲಾಂಬ್ಡಾ ಕುರಿತು ನಿಗಾ ವಹಿಸಲಾಗುತ್ತಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ದೇಶದಲ್ಲಿ ಸದ್ಯ ಲಾಂಬ್ಡಾ ರೂಪಾಂತರಿ ಇಲ್ಲ. ಆದರೆ, ಯಾವಾಗ ಬೇಕಾದರೂ ದೇಶದಲ್ಲಿ ಕಾಣಿಸಿಕೊಳ್ಳಬಹುದು. ಲಾಂಬ್ಡಾ ವೈರಾಣು ಅತ್ಯಂತ ಅಪಾಯಕಾರಿಯಾಗಿರುವುದರಿಂದ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೊಸದಿಲ್ಲಿಯ ಇನ್‌ಸ್ಟಿಟ್ಯೂಟ್‌ ಆಫ್‌ ಲಿವರ್‌ ಆ್ಯಂಡ್‌ ಬಿಲಿಯರಿ ಸೈನ್ಸಸ್‌ ನಿರ್ದೇಶಕ ಡಾ.ಎಸ್‌.ಕೆ.ಸಾರಿನ್‌ ಎಚ್ಚರಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಲಾಂಬ್ಡಾ ಏಳನೇ ರೂಪಾಂತರಿ. ಭಾರತದಲ್ಲಿ ಇದು ಇದುವರೆಗೆ ಪತ್ತೆಯಾಗಿಲ್ಲ. ಆದರೂ, ಸರ್ಕಾರ ಲಾಂಬ್ಡಾ ಕುರಿತು ನಿಗಾ ವಹಿಸಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್‌ ತಿಳಿಸಿದ್ದಾರೆ.

ಕೇರಳ, ಈಶಾನ್ಯದಲ್ಲಿ ಹೆಚ್ಚು:

ಕೇರಳ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಚೇತರಿಕೆ ಪ್ರಮಾಣ ಮಂದಗತಿಯಲ್ಲಿದೆ ಎಂದು ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆ ತಿಳಿಸಿದೆ. ಸಂಸ್ಥೆಯ ಲೆಕ್ಕಾಚಾರದ ಪ್ರಕಾರ, ಈ ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ನಿಧಾನವಾಗಿ ಏರುತ್ತಲೇ ಇದೆ. ಇನ್ನು ಝೈಕಾ ವೈರಾಣು ಕಾಣಿಸಿಕೊಂಡಿರುವ ಕೇರಳದಲ್ಲಿ ಭಾನುವಾರವೂ ಮೂರು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಝೈಕಾ ಪ್ರಕರಣಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ಬೆಲ್ಜಿಯಂನಲ್ಲಿ ದ್ವಿವೈರಾಣು ದಾಳಿ

ಬ್ರುಸೆಲ್ಸ್‌: ಬ್ರೆಜಿಲ್‌ನಲ್ಲಿ ಏಕಕಾಲಕ್ಕೆ ಕೊರೊನಾದ ರೂಪಾಂತರಿ ವೈರಾಣುಗಳಾದ ಅಲ್ಫಾ ಮತ್ತು ಬೀಟಾ ಎರಡೂ ವೈರಾಣು ಸೋಂಕಿಗೆ ತುತ್ತಾಗಿದ್ದ ಬೆಲ್ಜಿಯಂನ ವೃದ್ಧೆಯೊಬ್ಬರು ಅತ್ಯುತ್ತಮ ವೈದ್ಯಕೀಯ ಶುಶ್ರೂಷೆ ಹೊರತಾಗಿಯೂ ಮೃತಪಟ್ಟಿದ್ದಾರೆ.

ಈ ಎರಡೂ ವೈರಾಣುಗಳು ಈಗ ಬೆಲ್ಜಿಯಂನಲ್ಲಿ ಹರಡಿವೆ. ವೃದ್ಧೆಗೆ ಇಬ್ಬರು ಪ್ರತ್ಯೇಕ ಸೋಂಕಿತರಿಂದ ಎರಡು ರೂಪಾಂತರಿಗಳು ತಗುಲಿವೆ. ಇದು ಮುಂದಿನ ದಿನಗಳಲ್ಲಿ ಹೊಸ ತಲೆನೋವು ಉಂಟು ಮಾಡುವ ಸಾಧ್ಯತೆ ಇದೆ. ಇನ್ನು ಮುಂದೆ ಬರೀ ಸೋಂಕು ಪತ್ತೆ ಪರೀಕ್ಷೆ ಮಾಡುವುದರಿಂದ ಹೆಚ್ಚು ಪ್ರಯೋಜನವಾಗದು. ಬಹು ರೂಪಾಂತರಿ ತಗುಲಿರುವ ಬಗ್ಗೆಯೂ ಪರೀಕ್ಷೆಗಳು ನಡೆಯಬೇಕು ಎಂದು ಬೆಲ್ಜಿಯಂನ ವೈರಾಣು ತಜ್ಞೆ ಆನ್‌ ವಂಕೀರ್‌ಬರ್ಗ್‌ ಎಚ್ಚರಿಸಿದ್ದಾರೆ. ಅಲ್ಫಾ ವೈರಾಣು ಮೊದಲು ಇಂಗ್ಲೆಂಡಿನಲ್ಲಿ ಪತ್ತೆಯಾಗಿದ್ದರೆ, ಬೀಟಾ ವೈರಾಣು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಂಡುಬಂದಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: