ಮೈಸೂರು

ಮೈಸೂರಿನಲ್ಲಿ ನಲ್ಲಿ ಕಾರ್ಮಿಕರ ರಾಜ್ಯಮಟ್ಟದ ಸಮಾವೇಶ ಏ.30ಕ್ಕೆ

ಅಖಿಲ ಕರ್ನಾಟಕ ನಲ್ಲಿ ಕೆಲಸಗಾರರ ರಾಜ್ಯಮಟ್ಟದ ಪ್ರಥಮ ಸಮಾವೇಶವನ್ನು ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಹಾಗೂ ಇತರೆ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಎಂ.ಎಸ್. ತಿಳಿಸಿದರು.

ಗುರುವಾರ ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಏ.30ರ ಮಧ್ಯಾಹ್ನ 12 ಗಂಟೆಗೆ  ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆಯುವ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಸಂತೋಷ್ ಲಾಡ್, ತನ್ವೀರ್ ಸೇಠ್, ಸಂಸದರಾದ ಪ್ರತಾಪ್ ಸಿಂಹ, ಧ್ರುವನಾರಾಯಣ, ಶಾಸಕರಾದ ಸೋಮಶೇಖರ್, ವಾಸು, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಕಳಲೆ ಕೇಶವಮೂರ್ತಿ, ಜಿ.ಪಂ ಅಧ್ಯಕ್ಷೆ ನಯಿಮಾ ಸುಲ್ತಾನಾ, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ನಗರಪಾಲಿಕೆ ಸದಸ್ಯ ಸ್ನೇಕ್ ಶ್ಯಾಮ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಬೆಳಿಗ್ಗೆ 8 ಗಂಟೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದವರೆಗೆ ಜಾಥಾ ಹೊರಡಲಿದೆ. ರಾಜ್ಯದ ಕೋಲಾರದಿಂದ ಬೀದರ್ ವರೆಗೆ ಹಾಗೂ ಮಂಗಳೂರಿನಿಂದ ಚಾಮರಾಜ ನಗರದವರೆಗೂ ಸುಮಾರು 6 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಕಾರ್ಮಿಕ ಕುಟುಂಬಗಳಿಗೆ ಇ.ಎಸ್.ಐ, 60 ವರ್ಷ ಮೀರಿದ ಹಿರಿಯ ಕಾರ್ಮಿಕರಿಗೆ ನಿವೃತ್ತಿ ವೇತನ, ಬಡವರಿಗೆ ಸರ್ಕಾರದ ನಿಗಮ ಮಂಡಳಿಗಳು ಮತ್ತು ಇಂದಿರಾ, ಬಸವ, ಅಂಬೇಡ್ಕರ್ ಯೋಜನೆಗಳಲ್ಲಿ ಸ್ವಂತ ಸೂರು, ಪ್ಲಂಬರ್ ಟೂಲ್ಸ್ ಕಿಟ್ ಗೆ ಹೆಚ್ಚಿನ ಸಹಾಯ ಧನ, ಸರ್ಕಾರದ ಮಾನ್ಯತೆ ಪ್ರಮಾಣ ಪತ್ರ, ಕಾರ್ಮಿಕರ ಅಭಿವೃದ್ಧಿ ನಿಗಮದ ಸ್ಥಾಪನೆ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಸಂಘದ ಖಜಾಂಚಿ ಮಹೇಶ್.ಎಸ್, ಅಧ್ಯಕ್ಷ ಎಸ್.ಚಂದ್ರು, ನಿರ್ದೇಶಕರಾದ ಚಂದ್ರೇಗೌಡ, ಜಗದೀಶ್ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: