ಕರ್ನಾಟಕಪ್ರಮುಖ ಸುದ್ದಿ

ರೇಖಾ ಕದಿರೇಶ್ ಹತ್ಯೆ ಪ್ರಕರಣ: 24 ಗಂಟೆಗಳಲ್ಲಿ ಆರೋಪಿಗಳ ಬಂಧನ; ಪೊಲೀಸರಿಗೆ 1.25 ಲಕ್ಷ ಬಹುಮಾನ ಘೋಷಣೆ

ಬೆಂಗಳೂರು,ಜು.13- ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆಯಾದ 24 ತಾಸಿನಲ್ಲಿ ಹಂತಕ ಆರೋಪಿಗಳನ್ನು ಪತ್ತೆ ಮಾಡಿದ ತನಿಖಾ ತಂಡಕ್ಕೆ 1.25 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌ ಬಹುಮಾನ ಘೋಷಿಸಿ ತನಿಖಾ ತಂಡವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಜೂ.24 ರಂದು ರೇಖಾ ಕದಿರೇಶ್ ಹತ್ಯೆಯಾಗಿತ್ತು. ಪ್ರಕರಣ ಭೇದಿಸಲು ಡಿಸಿಪಿ ಸಂಜೀವ್ ಎಂ.ಪಾಟೀಲ್ ಅವರ ನೇತೃತ್ವದಲ್ಲಿ ಆರು ತಂಡ ರಚನೆ ಮಾಡಿದ್ದರು. ಆರೋಪಿಗಳನ್ನು ಒಂದೇ ದಿನದಲ್ಲಿ ಪತ್ತೆ ಮಾಡುವಲ್ಲಿ ತನಿಖಾ ತಂಡಗಳು ಯಶಸ್ವಿಯಾಗಿದ್ದವು. ಕಾಟನ್​ಪೇಟೆ ಇನ್​ಸ್ಪೆಕ್ಟರ್ ಚಿದಾನಂದ ಮೂರ್ತಿ, ಸಿಟಿಮಾರ್ಕೆಟ್ ಇನ್​ಸ್ಪೆಕ್ಟರ್ ಕುಮಾರಸ್ವಾಮಿ, ಕಾಮಾಕ್ಷಿಪಾಳ್ಯ ಇನ್​ಸ್ಪೆಕ್ಟರ್ ಪ್ರಶಾಂತ್, ಉಪ್ಪಾರಪೇಟೆ ಇನ್​ಸ್ಪೆಕ್ಟರ್ ಶಿವಸ್ವಾಮಿ, ಕಲಾಸಿಪಾಳ್ಯ ಇನ್​ಸ್ಪೆಕ್ಟರ್ ಚಂದ್ರಕಾಂತ್, ಚಾಮರಾಜಪೇಟೆ ಇನ್​ಸ್ಪೆಕ್ಟರ್ ಲೋಕಾಪುರ ನೇತೃತ್ವದ ತಂಡಗಳು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕೊಲೆ‌ ಸಂಬಂಧ ಘಟನೆ ನಡೆದ ಕೂಡಲೇ 50ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅದರಲ್ಲಿ 39 ಜನರನ್ನು ಪೊಲೀಸರು ರಾತ್ರಿಯಿಡೀ ವಿಚಾರಣೆ ನಡೆಸಿದ್ದರು. ಈ ವೇಳೆ ಆರೋಪಿ ಪೀಟರ್ ಜೊತೆಗೆ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದ. ಇವನಿಂದ ಮತ್ತಷ್ಟು ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದರು. ಎಲೆಕ್ಟ್ರಾನಿಕ್ ಸಿಟಿ, ಸಿಂಗೇನ ಅಗ್ರಹಾರ, ಚಂದಾಪುರ, ವರ್ತೂರು, ಹುಸ್ಕೂರು ಬಳಿ ಪೊಲೀಸರು ಹುಡುಕಾಟ ನಡೆಸಿದ್ದರು. ಅಹೋರಾತ್ರಿ ನಡೆದ ಕಾರ್ಯಾಚರಣೆಯಲ್ಲಿ 30ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ಪಾಲ್ಗೊಂಡಿದ್ದರು.

ಕೊಲೆ ಬಳಿಕ ಆರೋಪಿಗಳು ಒಂದೆಡೆ ನಿಲ್ಲದೇ ಆಟೋದಲ್ಲಿ ತಿರುಗುತ್ತಲೇ ಇದ್ದರು. ನಸುಕಿನ ವೇಳೆ ಆರೋಪಿಗಳು ಆಟೋದಲ್ಲಿ ತಿರುಗಾಡುತ್ತಿರುವ ಮಾಹಿತಿ ಆಧರಿಸಿ ತನಿಖಾ ತಂಡಗಳು ಬೆನ್ನತ್ತಿದ್ದವು. ಹಲಸೂರು ಕೆರೆ ಸಮೀಪದ ಆಸ್ಟಿಸ್ ಟೌನ್​ನಲ್ಲಿ ಪೊಲೀಸರಿಗೆ ಮೊದಲ ಬಾರಿಗೆ ಆರೋಪಿಗಳು ಓಡಾಡುತ್ತಿರುವ ಆಟೋ ಬಗ್ಗೆ ಮಾಹಿತಿ ಸಿಕ್ಕಿತ್ತು. ಮೈಸೂರು ರಸ್ತೆಯ ಮೂಲಕ ಅರೋಪಿಗಳು ಸಂಚರಿಸಿರುವ ವಿಷಯ ಪೊಲೀಸರಿಗೆ ಖಚಿತವಾಗಿತ್ತು. ಮರುದಿನ ಬೆಳಿಗ್ಗೆ ಒಂಬತ್ತು ಗಂಟೆ ಸುಮಾರಿನಲ್ಲಿ ಆರೋಪಿಗಳ ಜಾಡು ಕೈತಪ್ಪಿ ಹೋಗಿತ್ತು.

ಸ್ವಲ್ಪ ಹೊತ್ತಿನ ನಂತರ ಮಾಗಡಿ ರಸ್ತೆಯಲ್ಲಿ ಆರೋಪಿಗಳ ಚಲನಚಲನದ ಮಾಹಿತಿ ಸಿಕ್ಕಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಹಲವು ತಂಡಗಳೊಂದಿಗೆ ಆರೋಪಿಗಳ ಬೆನ್ನುಹತ್ತಿದರು. ಹನ್ನೆರಡು ಗಂಟೆ ವೇಳೆಗೆ ಸುಂಕದಕಟ್ಟೆ ಬಳಿಯ ಬಜಾಜ್ ಗ್ರೌಂಡ್ ಬಳಿ ಆರೋಪಿಗಳು ಇರುವ ಮಾಹಿತಿಯನ್ನು ದೃಢಪಡಿಸಿಕೊಂಡ ಉಪ್ಪಾರಪೇಟೆ ಇನ್​ಸ್ಪೆಕ್ಟರ್​ ಶಿವಸ್ವಾಮಿ ಮತ್ತು ಕಾಟನ್​ಪೇಟೆ ಇನ್​ಸ್ಪೆಕ್ಟರ್ ಚಿದಾನಂದಮೂರ್ತಿ ಆರೋಪಿಗಳನ್ನು ಗುರುತಿಸಿ ಬಂಧಿಸಲು ಮುಂದಾಗಿದ್ದರು. ಕಂಠಪೂರ್ತಿ ಕುಡಿದಿದ್ದ ಅರೋಪಿಗಳು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕರಿಯಣ್ಣ ಮತ್ತು ಮುಖ್ಯ ಪೇದೆ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು.

ಶರಣಾಗುವಂತೆ ಆರೋಪಿಗಳಿಗೆ ಕೇಳಿದರೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದರು. ಈ ವೇಳೆ ಪೀಟರ್ ಮತ್ತು ಮತ್ತೊಬ್ಬ ಅರೋಪಿ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಗಾಯಾಳು ಅರೋಪಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ರೇಖಾ ಅವರ ಪತಿ ಕದಿರೇಶ್ ಅಕ್ಕ ಮಾಲಾ ಮತ್ತು ಅತನ ಪುತ್ರ ಅರುಳ್ ಕೂಡ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನೂ ಸಹ ಬಂಧಿಸಲಾಗಿದೆ.

 

Leave a Reply

comments

Related Articles

error: