ಕ್ರೀಡೆವಿದೇಶ

ಶರಪೋವಾ ನಿಷೇಧ ಅಂತ್ಯ : ಮೊದಲ ಪಂದ್ಯವನ್ನೇ ಗೆದ್ದ ರಷ್ಯಾ ಟೆನಿಸ್ ತಾರೆ

ಸ್ಟುಟಗಾರ್ಟ್‌: ಉದ್ದೀಪನ ಮದ್ದು ಸೇವಿಸಿ 15 ತಿಂಗಳ ನಿಷೇಧ ಶಿಕ್ಷೆಗೆ ಒಳಗಾಗಿದ್ದ ರಷ್ಯಾದ ಟೆನಿಸ್‌ ತಾರೆ ಮರಿಯಾ ಶರಪೋವ ವೃತ್ತಿಪರ ಟೆನಿಸ್‌ಗೆ ಗೆಲುವಿನ ಮೂಲಕ ಮರಳಿದ್ದಾರೆ.

ಡಬ್ಲ್ಯುಟಿಎ ಟೂರ್ನಮೆಂಟ್‌ನ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದ ರಷ್ಯಾ ಬೆಡಗಿ 7–5, 6–3ರಿಂದ ರಾಬರ್ಟ್‌ ವಿನ್ಸಿ ವಿರುದ್ಧ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ತಾನು ಶಿಕ್ಷೆಯಿಂದ ವಿಚಲಿತಗೊಂಡಿಲ್ಲ ಎಂದು ಸಾರಿದರು.

ಗೆಲುವಿನ ಬಳಿಕ ಸಂತಸ ಹಂಚಿಕೊಂಡಿರುವ ರಷ್ಯಾ ಚೆಲುವೆ ಶರಪೋವ, ‘ಅತ್ಯಂತ ಸ್ಪಧಾರ್ತ್ಮಕ ಫ್ರೆಂಚ್‌ ಓಪನ್ ಮತ್ತು ವಿಂಬಲ್ಡನ್‌ನಂಥ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ಜೂನಿಯರ್‌ ಟೂರ್ನಿಗಳಲ್ಲಿ ಆಡಬೇಕಿದೆ’ ಎಂದಿದ್ದಾರೆ.

2016 ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಸಂದರ್ಭದಲ್ಲಿ ನಿಷೇಧಿತ ಮೆಲ್ಡೋನಿಯಂ ಮದ್ದು ಸೇವಿಸುವ ಮೂಲಕ ಸುದ್ದಿಯಾಗಿದ್ದ ಶರಪೋವ, ಈ ಗೆಲುವನ್ನು ವಿಶ್ವದಲ್ಲಿ ಶ್ರೇಷ್ಠ ಭಾವನೆ ಎಂದು ಬಣ್ಣಿಸಿದ್ದಾರೆ. ಅಂದಹಾಗೆ ಶರಪೋವಾಗೆ ಮ್ಯಾಡ್ರಿಡ್‌ ಮತ್ತು ರೋಮ್‌ ಡಬ್ಲ್ಯುಟಿಎ ಟೂರ್ನಿಗಳಲ್ಲಿ ಆಡಲು ವೈಲ್ಡ್‌ ಕಾರ್ಡ್‌ ಪ್ರವೇಶ ದೊರೆತಿದ್ದು, ಫ್ರೆಂಚ್‌ ಓಪನ್‌ನಲ್ಲಿ ಪಾಲ್ಗೊಳ್ಳಲು ವೈಲ್ಡ್‌ ಕಾರ್ಡ್‌ ಪ್ರವೇಶ ದೊರೆಯಲಿದೆಯೇ ಎಂಬುದನ್ನು ತಿಳಿದುಕೊಳ್ಳಲು ಅವರು ಮೇ 16ವರಗೆ ಕಾಯಬೇಕಿದೆ. ಮಾಜಿ ವಿಶ್ವ ನಂ.1 ಆಟಗಾರ್ತಿ ಶರಪೋವಾ, ಮೇ 22ರಿಂದ ಆರಂಭವಾಗುವ ಪ್ರತಿಷ್ಠಿತ ಫ್ರೆಂಚ್‌ ಓಪನ್‌ನಲ್ಲಿ ಮೂರನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯುವ ವಿಶ್ವಾಸ ಹೊಂದಿದ್ದಾರೆ.

‘ಎಲ್ಲರಿಗೂ ನಾನು ಎಂಥ ಸ್ಪರ್ಧಿ ಎಂಬುದು ತಿಳಿದಿದೆ. ಫ್ರೆಂಚ್‌ ಓಪನ್‌ನಲ್ಲಿ ಆಡಲು ಅವಕಾಶ ಸಿಕ್ಕರೆ ನಾನು ಸಾಧಿಸಿ ತೋರಿಸುತ್ತೇನೆ’ ಎಂದು ಅವರು ನುಡಿದಿದ್ದಾರೆ. ‘ಜನರ ಬಾಯಿಗೆ ಬೀಗ ಹಾಕಲಾಗುವುದಿಲ್ಲ. ಪ್ರತಿಯಾಗಿ ಅಂಗಳದಲ್ಲಿ ನಾನು ಮಾಡಬೇಕಿರುವುದನ್ನು ಮಾಡುವ ಮೂಲಕ ಉತ್ತರಿಸ ಬಯಸುತ್ತೇನೆ. ಹಿಂದೆ ಐದು ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳನ್ನು ಜಯಿಸುವ ಮೂಲಕ ನನ್ನ ಸಾಮರ್ಥ್ಯ ಪ್ರದರ್ಶಿಸಿದ್ದೇನೆ’ ಎಂದು ಕಿಕ್ಕಿರಿದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಯಾತನೆ ಅನುಭವಿಸಿದ್ದು, ಬದುಕನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ ಎಂದು ಅವರು ನುಡಿದಿದ್ದಾರೆ.

ತಾಯಿಯಾದ ಸೆರೆನಾಗೆ ಶುಭ ಹಾರೈಕೆ:

ವರ್ಷಾಂತ್ಯದಲ್ಲಿ ಮೊದಲ ಮಗುವಿಗೆ ಜನ್ಮ ನೀಡಲಿರುವ ತನ್ನ ಬದ್ಧವೈರಿ ಅಮೆರಿಕಾದ ಸೆರೆನಾ ವಿಲಿಯಮ್ಸ್‌ಗೆ ಶುಭ ಹಾರೈಸಿರುವ ಶರಪೋವಾ, ಬದುಕಿನಲ್ಲಿ ಮಹಿಳೆಗೆ ಸಿಗುವ ದೊಡ್ಡ ಉಡುಗೊರೆ ಇದಾಗಿದ್ದು, ಒಂದರ್ಥದಲ್ಲಿ ಅದು ಆಶೀರ್ವಾದ. ಆಕೆಯ ಬದುಕಿನಲ್ಲಿ ಅದೊಂದು ಅಮೋಘ ಅಧ್ಯಾಯ’ ಎಂದಿದ್ದಾರೆ.

(ಜಿ.ಪಿ)

Leave a Reply

comments

Related Articles

error: