ದೇಶಪ್ರಮುಖ ಸುದ್ದಿ

ಭಾರತದ ರೈಲುಗಳ ಸ್ಫೋಟಕ್ಕೆ ಪಾಕ್‌ ಸಂಚನ್ನು ಭೇದಿಸಿದ ಗುಪ್ತಚರ ಸಂಸ್ಥೆ

ನವದೆಹಲಿ,ಜು.14-ಭಾರತದ ರೈಲುಗಳ ಸ್ಫೋಟಕ್ಕೆ ಪಾಕಿಸ್ತಾನ ರೂಪಿಸಿದ್ದ ಸಂಚನ್ನು ಗುಪ್ತಚರ ಸಂಸ್ಥೆಗಳು ಭೇದಿಸಿವೆ. ಈ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

ಪಂಜಾಬ್‌ ಸೇರಿ ಹಲವು ರಾಜ್ಯಗಳಿಂದ ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ಕಾರ್ಮಿಕರು ಸಂಚರಿಸುವ ರೈಲುಗಳನ್ನು ಗುರಿಯಾಗಿಸಿ ದಾಳಿ ಮಾಡಲು ಐಎಸ್‌ಐ ರೂಪಿಸಿದ ಸಂಚನ್ನು ಗುಪ್ತಚರ ಸಂಸ್ಥೆಗಳು ಭೇದಿಸಿವೆ.

ಹೆಚ್ಚಾಗಿ ಕಾರ್ಮಿಕರು ಸಂಚರಿಸುವ ರೈಲುಗಳನ್ನೇ ಗುರಿಯಾಗಿಸಿ ದಾಳಿ ಮಾಡಿದರೆ ನೂರಾರು ಕಾರ್ಮಿಕರು ಸಾಯುತ್ತಾರೆ. ಇದರಿಂದ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂಬುದು ನೆರೆ ರಾಷ್ಟ್ರದ ಸಂಚಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ರೈಲು ಪೊಲೀಸ್‌ ಕೇಂದ್ರ ಕಚೇರಿ, ಎಸ್‌ಪಿ ಸೇರಿ ಹಲವು ಅಧಿಕಾರಿಗಳು ಹಾಗೂ ಕಚೇರಿಗಳಿಗೆ ಬಿಹಾರ ರೈಲ್ವೆ ಪೊಲೀಸ್‌ ಪತ್ರವೊಂದನ್ನು ಬರೆದಿದ್ದು, ಶ್ವಾನ ಪಡೆ ಹಾಗೂ ಬಾಂಬ್‌ ನಿಷ್ಕ್ರಿಯ ದಳವು ಯಾವುದೇ ಕ್ಷಣದಲ್ಲೂ ಕಾರ್ಯನಿರ್ವಹಿಸಲು ಸಿದ್ಧವಿರಬೇಕು ಎಂಬುದಾಗಿ ಸೂಚಿಸಲಾಗಿದೆ.

ರಾಜಸ್ಥಾನದಲ್ಲಿ ಕಟ್ಟೆಚ್ಚರ: ಗಡಿಗಳಲ್ಲಿ ಉಗ್ರ ಚಟುವಟಿಕೆ ಹೆಚ್ಚಾಗಿರುವ ಹಾಗೂ ದಾಳಿ ಭೀತಿಯಿರುವ ಹಿನ್ನೆಲೆಯಲ್ಲಿ ರಾಜಸ್ಥಾನದ ಹಲವು ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಸೆಕ್ಷನ್‌ 144 ಜಾರಿಗೊಳಿಸಲಾಗಿದೆ. ಶ್ರೀ ಗಂಗಾನಗರ, ಕರಾನ್ಪುರ, ರೈಸಿಂಗ್‌ ನಗರ, ಅನೂಪ್‌ಗಢ ಸೇರಿ ಹಲವೆಡೆ ಸೆಪ್ಟೆಂಬರ್‌ 11ರವರೆಗೆ ಹಲವು ಕಠಿಣ ನಿರ್ಬಂಧ ಜಾರಿಗೊಳಿಸಲಾಗಿದೆ. ಸೆಕ್ಷನ್‌ 144 ಜಾರಿ, ರಾತ್ರಿ 7ರಿಂದ ಬೆಳಿಗ್ಗೆ 6 ಗಂಟೆವರೆಗೆ ಜನ ಸಂಚಾರ ನಿಷೇಧ, ರಾತ್ರಿ ಪಟಾಕಿ ಸಿಡಿಸುವುದು ನಿಷೇಧ ಸೇರಿ ಹಲವು ನಿಯಮ ಜಾರಿಗೊಳಿಸಲಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: