ಕರ್ನಾಟಕಪ್ರಮುಖ ಸುದ್ದಿ

ರಾಜ್ಯ ಸರ್ಕಾರದ ಕಾನೂನುಗಳನ್ನು ವಿರೋಧಿಸುವವರು ರಾಜ್ಯದಲ್ಲಿರಲು ಅರ್ಹರಲ್ಲ: ಟಿ.ಎಸ್.ನಾಗಾಭರಣ

ರಾಜ್ಯ( ಬೆಂಗಳೂರು)ಜು.15:- ಕರ್ನಾಟಕದ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕಲಿಸಲು ಇಚ್ಛಿಸುವುದಿಲ್ಲವೋ ಅವರು ಕರ್ನಾಟಕದಲ್ಲಿರಲು ಅರ್ಹರಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಕನ್ನಡ ಭಾಷಾ ಕಲಿಕಾ ಅಧಿನಿಯಮದ ವಿರುದ್ಧ ಸಹಿ ಸಂಗ್ರಸುತ್ತಿರುವ ಪೋಷಕರ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆಯಲ್ಲಿರುವ ಪ್ರೆಸಿಡೆನ್ಸಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕನ್ನಡ ಭಾಷಾ ಕಲಿಕಾ ಅಧಿನಿಯಮದ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಸಿರುವುದು ಸರಿಯಾದ ಕ್ರಮವಲ್ಲ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಮಾನ್ಯ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಪ್ರಸ್ತುತ ಕಾಯಿದೆಯಲ್ಲಿ ಮಕ್ಕಳ ಮೇಲೆ ಭಾಷಾ ಕಲಿಕೆಯನ್ನು ಹೇರುತ್ತಿಲ್ಲ. ಬದಲಿಗೆ ಸಂವಿಧಾನಬದ್ಧವಾಗಿ ಹಂತ ಹಂತವಾಗಿ ಮಕ್ಕಳಿಗೆ ಭಾಷೆಯ ಕಲಿಕೆಯಲ್ಲಿ ತೊಡಗಿಸಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಹೇಳಿದ್ದಾರೆ.
ಕರ್ನಾಟಕ ಸರ್ಕಾರ ಕನ್ನಡ ಭಾಷಾ ಕಲಿಕಾ ಅಧಿನಿಯಮ-2017ರನ್ವಯ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳು ಕನ್ನಡವನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಕೇಂದ್ರ ಪಠ್ಯ ಕ್ರಮದ ಸಿ.ಬಿ.ಎಸ್.ಇ, ಐ.ಸಿ.ಎಸ್.ಇ. ಸೇರಿದಂತೆ ಇತರೆ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಕೆಲವು ಹೊರ ರಾಜ್ಯದ ಪೋಷಕರು ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಆನ್ಲೈನ್ ಪಿಟೀಷನ್ ಮೂಲಕ ಸಹಿ ಸಂಗ್ರಹ ಅಭಿಯಾನ ಆರಂಭಿಸಿರುವುದು ದುರಾದೃಷ್ಟಕರ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅನಿವಾರ್ಯ ಕಾರಣಗಳಿಂದಾಗಿ ರಾಜ್ಯದಲ್ಲಿ ನೆಲೆಸಿರುವ ಜನರು ಅರ್ಥೈಸಿಕೊಳ್ಳಬೇಕು. ಯಾವುದನ್ನು ತಪ್ಪಾಗಿ ಗ್ರಹಿಸಿ ಭಾಷಾ ಸೌಹಾರ್ದತೆಗೆ ತೊಡಕುಂಟಾಗದಂತೆ ನಡೆದುಕೊಳ್ಳಬೇಕು ಎಂದು ಪೋಷಕರಿಗೆ ಆಗ್ರಹಿಸಿದ್ದಾರೆ.
ಕನ್ನಡ ಕಲಿಕಾ ಅಧಿನಿಯಮವನ್ನು ರಾಜ್ಯದ ಎಲ್ಲ ಶಾಲೆಗಳಲ್ಲೂ ಕಡ್ಡಾಯವಾಗಿ ಜಾರಿಗೊಳಿಸುವಂತೆ ಮಾನ್ಯ ಶಿಕ್ಷಣ ಸಚಿರಾದ ಎಸ್.ಸುರೇಶ್ ಕುಮಾರ್ ಅವರನ್ನು ಆಗ್ರಹಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: