
ಮೈಸೂರು
ನರೇಗಾ ಯೋಜನೆಯಡಿ ರೈತರಿಗೆ ಅನುಕೂಲವಾಗುವ ಕಾಮಗಾರಿ ಅನುಷ್ಠಾನಗೊಳಿಸಿ: ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ
ಮೈಸೂರು, ಜು .17:- ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೈತರಿಗೆ ಅನುಕೂಲವಾಗುವಂಥ ಕಾಮಗಾರಿಗಳನ್ನು ಹೆಚ್ಚಾಗಿ ಅನುಷ್ಠಾನಗೊಳಿಸಿ ಎಂದು ವರುಣಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.
ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ತಾಲ್ಲೂಕು ಮಟ್ಟದ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರೈತರ ವ್ಯವಸಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ಬದು, ಕೃಷಿಹೊಂಡ ನಿರ್ಮಾಣ, ನಾಲೆಗಳ ಪುನಶ್ಚೇತನ ಕಾಮಗಾರಿ ಹೆಚ್ಚಾಗಿ ಕೈಗೊಳ್ಳಬೇಕು. ಪ್ರಮುಖವಾಗಿ ಎಲ್ಲಾ ಗ್ರಾಮಗಳಲ್ಲೂ ಒಕ್ಕಣೆ ಕಣವನ್ನು ನಿರ್ಮಿಸಬೇಕು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.
ಅಗತ್ಯವಿರುವ ಗ್ರಾಮಗಳಲ್ಲಿ ಸ್ಮಶಾನಗಳನ್ನು ಉತ್ತಮವಾಗಿ ಅಭಿವೃದ್ಧಿಪಡಿಸಬೇಕು. ಹೊಲಗಳಿಗೆ ರಸ್ತೆ, ಶಾಲೆಗಳ ಕಾಂಪೌಂಡ್ ನಿರ್ಮಿಸಬೇಕು. ಕೆರೆಗಳ ಸಮಗ್ರ ಅಭಿವೃದ್ಧಿಯಲ್ಲಿ ಕೋಡಿ ನಿರ್ಮಾಣ, ಕೆರೆ ಹೂಳೆತ್ತುವ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ನಿಗದಿತ ಗುರಿಗಿಂತ ಹೆಚ್ಚು ಪ್ರಗತಿ ಸಾಧಿಸಿ, ಇತರೆ ತಾಲ್ಲೂಕಿಗೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹೆಚ್ಚು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕೆಲವು ಗ್ರಾಮಗಳಲ್ಲಿ ಚರಂಡಿ ನೀರನ್ನು ನಾಲೆಗೆ ಹರಿಸುವುದನ್ನು ತಡೆಗಟ್ಟಲು ನರೇಗಾ ಯೋಜನೆಯಡಿ ಬಚ್ಚಲು ಗುಂಡಿ ನಿರ್ಮಾಣ ಮಾಡಿ. ನೀರಿನ ಮೀಟರ್ ಅಳವಡಿಸುವ ಸಂಬಂಧ ಸಾರ್ವಜನಿಕರ ಆಕ್ಷೇಪಣೆ ಇದ್ದರೆ ಸಭೆ ನಡೆಸಿ ನೀರಿನ ಮಹತ್ವ ತಿಳಿಸುವ ಮೂಲಕ ಮನವರಿಕೆ ಮಾಡಿ ಎಂದು ಹೇಳಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂ.ಎಸ್.ರಮೇಶ್, ತಹಶಿಲ್ದಾರ್ ರಕ್ಷಿತ್ ಅವರು ಸೇರಿದಂತೆ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಪಿಡಿಒ ಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)