ಮೈಸೂರು

ಮಾಜಿ ಸಂಸದರಾದ ಜಿ. ಮಾದೇಗೌಡರ ನಿಧನಕ್ಕೆ ಸುತ್ತೂರು ಶ್ರೀ ಸಂತಾಪ

ಮೈಸೂರು,ಜು.18:- ಖ್ಯಾತ ಗಾಂಧೀವಾದಿ, ಮಾಜಿ ಸಂಸದರಾದ ಜಿ. ಮಾದೇಗೌಡರು ವಯೋಸಹಜ ಕಾರಣಗಳಿಂದಾಗಿ ಮದ್ದೂರಿನಲ್ಲಿ ನಿಧನ ಹೊಂದಿರುವುದು ವಿಷಾದದ ಸಂಗತಿ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ರೈತರ ಆತ್ಮಾಭಿಮಾನ, ಅಂತಸ್ಸಾಕ್ಷಿಯ ಪ್ರಜ್ಞೆಯಂತಿದ್ದ ಮಾದೇಗೌಡರು ಸೃಜನಾತ್ಮಕ ಛಲಕ್ಕೆ ಮತ್ತೊಂದು ಹೆಸರು. ಕಾವೇರಿ ವಿವಾದದ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲ ಧೀಮಂತ ಮುತ್ಸದ್ಧಿ ರಾಜಕಾರಣಿ ಮಾದೇಗೌಡರು. ಬಹುಶಃ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಧೀರತೆ ಅವರ ಎಲ್ಲ ಹೋರಾಟಗಳ ಹಿಂದಿನ ಕ್ರತುಶಕ್ತಿಯಾಗಿತ್ತು. ಕಾವೇರಿ ಜಲವಿವಾದದ ಕಾರಣವನ್ನೇ ಮುಂದಿಟ್ಟುಕೊಂಡು ಅವರು ತಮ್ಮ ಸಂಸದ ಸ್ಥಾನಕ್ಕೇ ರಾಜೀನಾಮೆ ನೀಡಿದುದು ಅವರು ಸಿದ್ಧಾಂತ, ಬದ್ಧತೆಗಳ ಕುರಿತು ಹೊಂದಿದ್ದ ಮೌಲ್ಯಗಳಿಗೆ ನಿದರ್ಶನದಂತಿತ್ತು. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಮಂಡ್ಯದ ರೈತರ ಹಿತಾಸಕ್ತಿಗಳನ್ನು ಸದಾ ಸಂರಕ್ಷಿಸುವ ಮಾತೃಚೈತನ್ಯವಾಗಿದ್ದರು. ಅವರ ಒಂದೇ ಒಂದು ಕರೆಗೆ ಇಡೀ ಜಿಲ್ಲೆಯನ್ನು ಬಡಿದೆಬ್ಬಿಸುವಂಥ ಅಸಾಮಾನ್ಯ ಶಕ್ತಿಯಿತ್ತು.
ಸ್ವಾತಂತ್ರ್ಯ ಹೋರಾಟಗಾರ, ಕೆಚ್ಚೆದೆಯ ಕಲಿ. ಮಂಡ್ಯದ ಅಸ್ಮಿತೆಯ ಹರಿಕಾರರಾದ ಶ್ರೀ ಮಾದೇಗೌಡರ ಅಗಲುವಿಕೆಯಿಂದ ತೆರವಾಗಿರುವ ಸ್ಥಾನವನ್ನು ಬೇರಾರೂ ತುಂಬಲಾರರು.
ದಿವಂಗತರ ಅತ್ಮಕ್ಕೆ ಶಾಂತಿಯನ್ನು, ಅವರ ಕುಟುಂಬಸ್ಥರಿಗೆ, ಅಸಂಖ್ಯಾತ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಹಾರೈಸುತ್ತೇವೆ ಎಂದಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: