ಮನರಂಜನೆ

ಗದ್ದೆಗಿಳಿದು ಭತ್ತದ ನಾಟಿ ಮಾಡಿದ ನಟ ರಕ್ಷಿತ್ ಶೆಟ್ಟಿ

ಬೆಂಗಳೂರು,ಜು.19- ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗದ್ದೆಗಿಳಿದು ರೈತನಂತೆ ಭತ್ತದ ನಾಟಿ ಮಾಡಿದ್ದಾರೆ.

ತಮ್ಮ ಹುಟ್ಟೂರು ಉಡುಪಿಯ ಭಿರ್ತಿಯಲ್ಲಿ ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ಭತ್ತದ ಬೇಸಾಯ ಮಾಡುವ ಕೇದಾರೋತ್ಥಾನ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಕ್ಷಿತ್ ಶೆಟ್ಟಿ ಪಂಚೆ ಧರಿಸಿ, ತಲೆಗೊಂದು ಮುಟ್ಟಾಲೆ ಇಟ್ಟು, ಕೆಸರು ಗದ್ದೆಗಿಳಿದು ನಾಟಿ ಮಾಡಿದ್ದಾರೆ.

ಮಳೆಯಲ್ಲೇ ಗದ್ದೆಗೆ ಇಳಿದು ನೇಜಿ ನಾಟಿ ಮಾಡಿದ ರಕ್ಷಿತ್ ಶೆಟ್ಟಿ, ಬಾಲ್ಯದಲ್ಲಿ ಅಜ್ಜಿ ಮನೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡದನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಇದರಿಂದ ಬೆಳೆದ ಕುಚ್ಚಲು ಅಕ್ಕಿಗೆ ರಾಯಭಾರಿ ಆಗಲೂ ತಯಾರಿದ್ದೇನೆ ಎಂದಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದ 2 ಸಾವಿರ ಎಕರೆ ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ, ಭತ್ತದ ಬೇಸಾಯ ಮಾಡುವ ಶಾಸಕ ರಘುಪತಿ ಭಟ್ ಅವರ ವಿಶೇಷ ಕಾರ್ಯಕ್ರಮವನ್ನು ರಕ್ಷಿತ್ ಶ್ಲಾಘಿಸಿದ್ದಾರೆ. ತಮ್ಮೂರಿನ ಮೆಚ್ಚಿನ ನಟನನ್ನು ನೋಡಬೇಕು, ಶೆಟ್ರ ಜೊತೆಗೆ ಒಂದು ಪೋಟೋ ತೆಗೆದುಕೊಳ್ಳಬೇಕೆಂದು ನೂರಾರು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಎಲ್ಲರ ಜೊತೆಯೂ ನಗುಮುಖದಿಂದ ಸೆಲ್ಫಿ ಕ್ಲಿಕ್ಕಿಸಿದ ರಕ್ಷಿತ್ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉದ್ಯಮಿ ಬಂಜಾರ ಪ್ರಕಾಶ್ ಶೆಟ್ಟಿ ಬೆಂಗಳೂರಿನಲ್ಲೂ ಎರಡು ಎಕರೆಯಲ್ಲಿ ಭತ್ತದ ಬೇಸಾಯ ಮಾಡಿ, ಕುಚ್ಚಲಕ್ಕಿ ಊಟ ಮಾಡುತ್ತಿದ್ದೇನೆ,‌ ಭತ್ತ ಬೇಸಾಯದ ಖುಷಿಯೇ ವಿಶೇಷವಾದದ್ದು ಎಂದರು. (ಎಂ.ಎನ್)

Leave a Reply

comments

Related Articles

error: