ಮೈಸೂರು

ಬಾಡಿಗೆ ಮನೆಯಲ್ಲಿರುವ ಕಟ್ಟಡ ಕಾರ್ಮಿಕರಿಗೆ ಆಗಸ್ಟ್ 15 ರಂದು ಮನೆ ಹಂಚಿಕೆ: ಶಾಸಕ ಎಸ್.ಎ.ರಾಮದಾಸ್ ಭರವಸೆ

ಮೈಸೂರು,ಜು.20-ಬಾಡಿಗೆ ಮನೆಯಲ್ಲಿ ವಾಸವಾಗಿರುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಗಸ್ಟ್ 15 ರಂದು ಮನೆಗಳನ್ನು ಹಂಚಿಕೆ ಮಾಡಿಸುವ ಜವಬ್ದಾರಿ ನನ್ನದು ಎಂದು ಶಾಸಕ ಎಸ್.ಎ.ರಾಮದಾಸ್ ಭರವಸೆ ನೀಡಿದ್ದಾರೆ.

ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಕ್ರೆಡಾಯ್ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನಗರದ ಜೆಪಿ ನಗರದಲ್ಲಿರುವ ಬಿಲ್ಡರ್ಸ್ ಅಸೋಸಿಯೇಷನ್ ನಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೋವಿಡ್-19 ಸಂಕಷ್ಟದಲ್ಲಿರುವ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.

ಬಾಡಿಗೆ ಮನೆಯಲ್ಲಿರುವ ಕಟ್ಟಡ ಕಾರ್ಮಿಕರ ವಿವರನ್ನು ಪಟ್ಟಿ ಮಾಡಿ ನನಗೆ ಕೊಡಿ. ಅವರಿಗೆ ಸರ್ಕಾರದ ವ್ಯವಸ್ಥೆಯಲ್ಲೂ ಹಣ ಕೊಡಿಸುವುದರ ಜೊತೆಗೆ ಆಗಸ್ಟ್ 15ರಂದು ಅವರಿಗೆ ಮನೆಗಳನ್ನು ಹಂಚಿಕೆ ಮಾಡಿಸುವ ವ್ಯವಸ್ಥೆ ಮಾಡಲಾಗುವುದು. ಸುಮಾರು 11 ರಿಂದ 14 ಲಕ್ಷ ರೂ. ವರೆಗಿನ ಮೊತ್ತದ ಕಟ್ಟಡಗಳಿವೆ. ಅದಕ್ಕೆ ಸಂಬಂಧಪಟ್ಟ ಆರಂಭಿಕ ಮೊತ್ತವನ್ನು ಹೊಂದಿಸುವ ಚಿಂತನೆ ನಡೆಸಲಾಗುತ್ತಿದೆ. ಜನವರಿಯೊಳಗೆ ಇದೆಲ್ಲವೂ ಆಗಲಿದೆ ಎಂದರು.

ಕಟ್ಟಡ ಕಾರ್ಮಿಕರನ್ನು ವಿದೇಶಕ್ಕೆ ಕಳುಹಿಸಲು ವಿಶೇಷ ಕೌಶಲ್ಯ ತರಬೇತಿ:

ಕಟ್ಟಡ ಕಾರ್ಮಿಕರು ವಿದೇಶಗಳಿಗೂ ತೆರಳಿ ಕೆಲಸ ಮಾಡಬಹುದು ಎಂಬ ಉದಾಹರಣೆಯನ್ನು ಮೈಸೂರಿನಿಂದಲೇ ಶುರು ಮಾಡಬೇಕೆಂಬುದು ನನ್ನ ಆಸೆ. ಯಾರಿಗೆ ಆಸಕ್ತಿ ಇದೆಯೋ ಅವರ ಹೆಸರನ್ನು ನೋಂದಣಿ ಮಾಡಿಕೊಳ್ಳಿ. ಅವರಿಗೆ ಕೇಂದ್ರ ಸರ್ಕಾರದ ವಿಶೇಷ ಕೌಶಲ್ಯ ತರಬೇತಿ ನೀಡಿ ಒಂದು ಬ್ಯಾಚ್ ಅನ್ನು ಮೈಸೂರಿನಿಂದ ವಿದೇಶಕ್ಕೆ ಕಳುಹಿಸುವ ಕೆಲಸ ಮಾಡೋಣ. ಕ್ರೆಡಾಯ್ ಮತ್ತು ಬಿಲ್ಡರ್ ಅಸೋಸಿಯೇಷನ್ ಈ ಕೆಲಸವನ್ನು ಮಾಡಬೇಕು. ನಿಮ್ಮೊಂದಿಗೆ ನಾವು ಹಾಗೂ ಸರ್ಕಾರ ಸಹ ಇರಲಿದೆ. ಇದನ್ನು ಆಗಸ್ಟ್ ತಿಂಗಳಿನಲ್ಲಿ ಮಾಡುವ ಆಲೋಚನೆ ಇತ್ತು. ಆ ಜವಾಬ್ದಾರಿಯನ್ನು ನಿಮಗೆ ಕೊಡುತ್ತಿದ್ದೇನೆ. ಆ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಹೇಳಿದರು.

ಕಟ್ಟಡ ಕಾರ್ಮಿಕರು ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಹೆಸರನ್ನು ನೋಂದಾವಣೆ ಮಾಡಿಸುವ ಸಾಕಷ್ಟು ಪ್ರಯತ್ನಗಳಾದರೂ ಕೆಲ ಗಾರೆ ಕೆಲಸಗಾರರು, ಕಟ್ಟಡ ಕಾರ್ಮಿಕರು, ಎಲೆಕ್ಟ್ರಿಷಿಯನ್, ಫ್ಲೋರಿಂಗ್ ಕೆಲಸ ಮಾಡುತ್ತಿರುವವರು ಅರಿವಿನ ಕೊರತೆಯಿಂದಾಗಿ ಇನ್ನು ನೋಂದಣಿ ಮಾಡಿಸಿಕೊಂಡಿಲ್ಲ. ಅಸೋಸಿಯೇಷನ್ ಮೂಲಕ ನೋಂದಣಿ ಮಾಡಿಸುವ ಕೆಲಸವಾಗುತ್ತಿದೆ. ಆದರೂ ಸ್ವತಃ ಅವರೇ ಬಂದು ನೋಂದಣಿ ಮಾಡಿಸಿಕೊಳ್ಳಲು ಅರಿವು ಮೂಡಿಸುವ ಜವಬ್ದಾರಿ ನಮ್ಮ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಹೇಮಂತ್, ಅಜಿತ್ ನಾರಾಯಣ್, ಮುರಳೀಧರ್, ಎಎಸ್ ಸಿರಾಜೇಶ್, ನಗರಪಾಲಿಕೆ ಸದಸ್ಯರಾದ ಶಾಂತಮ್ಮ ವೀರೇಗೌಡ ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: