ಕ್ರೀಡೆಪ್ರಮುಖ ಸುದ್ದಿ

ಶ್ರೀಲಂಕಾ ವಿರುದ್ಧ ಭಾರತಕ್ಕೆ ಸರಣಿ ಗೆಲುವು: ದಾಖಲೆ ನಿರ್ಮಿಸಿದ ದೀಪಕ್ ಚಾಹರ್

ಕೊಲಂಬೊ,ಜು.21- ಶ್ರೀಲಂಕಾ ವಿರುದ್ಧ ನಿನ್ನೆ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 3 ವಿಕೆಟ್ ಅಂತರದ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿದ ದೀಪಕ್ ಚಾಹರ್ (ಅಜೇಯ 69 ರನ್ ಹಾಗೂ 2 ವಿಕೆಟ್) ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡು ಶ್ರೀಲಂಕಾ ನೀಡಿದ 276 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 18 ಓವರ್‌ಗಳಲ್ಲೇ 116 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು. ಅಲ್ಲದೆ 35.1 ಓವರ್‌ಗಳಲ್ಲಿ 193 ರನ್ನಿಗೆ ಏಳು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

ಈ ಹಂತದಲ್ಲಿ ಜೊತೆಗೂಡಿದ ಚಾಹರ್ ಹಾಗೂ ಭುವಿ ಮುರಿಯದ ಎಂಟನೇ ವಿಕೆಟ್‌ಗೆ 84 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿ ತಂಡಕ್ಕೆ ಸ್ಮರಣೀಯ ಗೆಲುವು ಒದಗಿಸಿಕೊಟ್ಟರು.

ದೀಪಕ್ ಚಾಹರ್ ದಾಖಲೆ:

ಏಕದಿನದಲ್ಲಿ ಎಂಟನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದು ಅರ್ಧಶತಕ ಬಾರಿಸಿದ ಹಿರಿಮೆಗೆ ದೀಪಕ್ ಚಾಹರ್ ಪಾತ್ರರಾಗಿದ್ದಾರೆ. ಎಂಟನೇ ಕ್ರಮಾಂಕದಲ್ಲಿ ಅರ್ಧಶತಕ ಬಾರಿಸಿ ಗೆಲುವು ದೊರಕಿಸಿಕೊಟ್ಟ ಭಾರತದ ಮೊದಲ ಆಟಗಾರ ಎಂಬ ಖ್ಯಾತಿಯೂ ಅವರಿಗೆ ಸಲ್ಲುತ್ತದೆ. 2017ರಲ್ಲಿ ಒಂಬತ್ತನೇ ಕ್ರಮಾಂಕದಲ್ಲಿ ಭುವನೇಶ್ವರ್ ಕುಮಾರ್ ಅಜೇಯ 53 ರನ್ ಗಳಿಸಿದ್ದರು.

ಶ್ರೀಲಂಕಾ ವಿರುದ್ಧ ಎಂಟನೇ ಕ್ರಮಾಂಕದಲ್ಲಿ ಅರ್ಧಶತಕ ಬಾರಿಸಿದ ಭಾರತದ ಎರಡನೇ ಆಟಗಾರ ಚಾಹರ್ ಆಗಿದ್ದಾರೆ. 2009ರಲ್ಲಿ ರವೀಂದ್ರ ಜಡೇಜ ಪದಾರ್ಪಣಾ ಪಂದ್ಯದಲ್ಲಿ ಫಿಫ್ಟಿ ಬಾರಿಸಿದ್ದರು.

ಒಟ್ಟಾರೆಯಾಗಿ ಭಾರತದ ಪರ ಜಡೇಜ (77 ರನ್, ನ್ಯೂಜಿಲೆಂಡ್ ವಿರುದ್ಧ) ಬಳಿಕ ದೀಪಕ್ ಚಾಹರ್ ಎಂಟನೇ ಕ್ರಮಾಂಕದಲ್ಲಿ ವೈಯಕ್ತಿಕ ಗರಿಷ್ಠ ರನ್ ಪೇರಿಸಿದ್ದಾರೆ. ಏಕದಿನದಲ್ಲಿ ಎಂಟನೇ ಕ್ರಮಾಂಕದಲ್ಲಿ ಭಾರತದ ಪರ ಗರಿಷ್ಠ ರನ್‌ಗಳ ಜೊತೆಯಾಟ ನೀಡಿರುವುದರ ಸಾಲಿನಲ್ಲಿ ದೀಪಕ್ ಹಾಗೂ ಭುವಿ (84* ರನ್) ಜೋಡಿಯು ಜಂಟಿ ಎರಡನೇ ಸ್ಥಾನ ಹಂಚಿಕೊಂಡಿದೆ.

ಸೂರ್ಯಕುಮಾರ್ ಯಾದವ್ (53), ಮನೀಶ್ ಪಾಂಡೆ (37), ಕೃಣಾಲ್ ಪಾಂಡ್ಯ (35) ಹಾಗೂ ಭುವನೇಶ್ವರ್ ಕುಮಾರ್ (19*) ಉಪಯುಕ್ತ ನೆರವು ನೀಡಿದ್ದರು. ಈ ಮೊದಲು ಬೌಲಿಂಗ್‌ನಲ್ಲಿ ಭುವಿ ಹಾಗೂ ಯಜುವೇಂದ್ರ ಚಾಹಲ್ ತಲಾ ಮೂರು ವಿಕೆಟ್‌ ಕಬಳಿಸಿದ್ದರು.

ಲಂಕಾ ವಿರುದ್ಧ ಸತತ 9ನೇ ಏಕದಿನ ಸರಣಿ ಗೆಲುವು:

ಈ ಗೆಲುವಿನ ಮೂಲಕ ದಾಖಲೆಗಳ ಸರಮಾಲೆ ಸೃಷ್ಟಿಯಾಗಿದೆ. ಶ್ರೀಲಂಕಾ ವಿರುದ್ಧ ಭಾರತ ತಂಡವು ಸತತ ಒಂಬತ್ತನೇ ಏಕದಿನ ಸರಣಿ ಗೆಲುವು ದಾಖಲಿಸಿದೆ. 1997ರಲ್ಲಿ ಭಾರತ ವಿರುದ್ಧ ಶ್ರೀಲಂಕಾ ತಂಡವು ಕೊನೆಯದಾಗಿ ಗೆದ್ದಿತ್ತು. ಅಲ್ಲಿಂದ ಬಳಿಕ ಆಡಿರುವ 12 ಸರಣಿಗಳ ಪೈಕಿ 10ರಲ್ಲಿ ಭಾರತ ಗೆಲುವು ಬಾರಿಸಿದೆ. ಎರಡು ಸರಣಿ ಡ್ರಾದಲ್ಲಿ ಅಂತ್ಯಗೊಂಡಿತ್ತು.

ಇನ್ನು ಕ್ರಿಕೆಟ್‌ನ ಎಲ್ಲ ಮಾದರಿಯಲ್ಲಿ ಲಂಕಾ ವಿರುದ್ಧ ಸತತ 11ನೇ ಸರಣಿ ಗೆಲುವು ದಾಖಲಿಸಿದೆ. 2008ರಲ್ಲಿ ಶ್ರೀಲಂಕಾ ಕೊನೆಯದಾಗಿ ಭಾರತ ವಿರುದ್ಧ ಉಭಯ ಸರಣಿ ಗೆದ್ದಿತ್ತು. ಅಂದು ಟೆಸ್ಟ್ ಸರಣಿಯಲ್ಲಿ 2-1ರ ಅಂತರದಲ್ಲಿ ಭಾರತ ಸೋಲನುಭವಿಸಿತ್ತು. ಲಂಕಾ ನೆಲದಲ್ಲಿ ಟೀಮ್ ಇಂಡಿಯಾ ಅವರದ್ದೇ ತಂಡದ ವಿರುದ್ಧ ಸತತ 10ನೇ ಏಕದಿನ ಗೆಲುವು ದಾಖಲಿಸಿದೆ. 2012ರಲ್ಲಿ ಅಲ್ಲಿ ಭಾರತ ಕೊನೆಯದಾಗಿ ಸೋತಿತ್ತು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: