ಕರ್ನಾಟಕಪ್ರಮುಖ ಸುದ್ದಿ

ಪೆಗಾಸಸ್ ವಿವಾದ: ಅಧಿಕಾರಕ್ಕೆ ಬರಲು ಬಿಜೆಪಿ ಪ್ರಯೋಗಿಸುವ ಅಸ್ತ್ರಗಳಲ್ಲಿ ಇದೂ ಒಂದು; ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಜು.21- ದೇಶದಲ್ಲಿ ಪೆಗಾಸಸ್ ಬೇಹುಗಾರಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು, ರಾಜ್ಯಗಳಲ್ಲಿ ಸರ್ಕಾರ ಕೆಡವಿ, ಸರ್ಕಾರವನ್ನು ತರಲು ಬಿಜೆಪಿ ಪ್ರಯೋಗಿಸಿರುವ ಅಸ್ತ್ರಗಳಲ್ಲಿ ಇದೂ ಒಂದು ಎಂದು ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಎಚ್ಡಿಕೆ ಅವರು, ಪೆಗಾಸಿಸ್ ಗೂಢಾಚರ್ಯೆಯಲ್ಲಿ‌ ಕೇಂದ್ರ ಸರ್ಕಾರ ಸಿಲುಕಿಕೊಂಡಿದೆ. ಇದು ಮಾನವ ಹಕ್ಕು ಉಲ್ಲಂಘನೆಯಂಥ ಪ್ರಕರಣವಾದರೂ ಇತ್ತೀಚೆಗೆ ಕೇಂದ್ರ ಆದ್ಯತೆ ಮೇಲೆ ಗೂಢಚರ್ಯೆ ನಡೆಸುತ್ತಿರುವುದು ಗುಟ್ಟೇನಲ್ಲ. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು, ರಾಜ್ಯಗಳಲ್ಲಿ ಸರ್ಕಾರ ಕೆಡವಿ, ಸರ್ಕಾರವನ್ನು ತರಲು ಬಿಜೆಪಿ ಪ್ರಯೋಗಿಸಿರುವ ಅಸ್ತ್ರಗಳಲ್ಲಿ ಇದೂ ಒಂದು ಎಂದು ಆಪಾದಿಸಿದ್ದಾರೆ.

ನನ್ನ ಮೇಲೆ ಗೂಢಚರ್ಯೆ ನಡೆಸಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕೊನೆಗೆ ನನ್ನ ಮೇಲೆ ಫೋನ್ ಕದ್ದಾಲಿಕೆ ಆರೋಪ ಮಾಡಿತು. ಸಿಬಿಐ ತನಿಖೆ ನಡೆಸಿತು. ಅದಾಗಲೇ ಅಪಮಾರ್ಗದಲ್ಲಿ ಹೆಜ್ಜೆ ಹಾಕಿದ್ದ ಬಿಜೆಪಿ, ನನ್ನ ಮೇಲಿನ ತನಿಖೆ ಮೂಲಕ ಆತ್ಮವಂಚನೆಯಿಂದ ನಡೆದುಕೊಂಡಿದೆ. ಅಧಿಕಾರಕ್ಕಾಗಿ ಬಿಜೆಪಿ ಕೀಳು ಮಟ್ಟಕ್ಕಿಳಿಯುತ್ತಿದೆ. ಇದು ಅಪಾಯಕಾರಿ ಎಂದು ಹೇಳಿದ್ದಾರೆ.

ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಹೋರಾಟಗಾರರ ಮೇಲೆ ಗೂಢಚರ್ಯೆ ನಡೆಸಿರುವ ಬಿಜೆಪಿ ಮುಂದೊಂದು ದಿನ ಅಗತ್ಯಬಿದ್ದಾಗ ಜನರ ವೈಯಕ್ತಿಕ ಬದುಕಿನಲ್ಲಿ ಇಣುಕದು ಎಂಬುದಕ್ಕೆ ಖಚಿತತೆ ಇದೆಯೇ? ಅಂತ ದಿನ ದೂರವಿಲ್ಲ. ಬಿಜೆಪಿ ದಮನಕಾರಿ ನಡೆ ಈಗ ಮಾನವ ಹಕ್ಕುಗಳತ್ತ ಕೇಂದ್ರೀಕೃತವಾಗಿದೆ.  ಬಿಜೆಪಿಯ ಇಂಥ ಕೃತ್ಯಗಳ ಬಗ್ಗೆ ಜನರು ಜಾಗೃತರಾಗಬೇಕು ಎಂದು ಟ್ವೀಟ್ ಮಾಡಿದ್ದಾರೆ. (ಎಂ.ಎನ್)

Leave a Reply

comments

Related Articles

error: