ಕ್ರೀಡೆ

ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಜಯಿಸಿದ ಭಾರತ ತಂಡ: ವಿಶೇಷ ಸಂದೇಶ ರವಾನಿಸಿದ ವಿರಾಟ್ ಕೊಹ್ಲಿ

ಕೊಲಂಬೊ,ಜು.21-ಶ್ರೀಲಂಕಾ ವಿರುದ್ಧ ಎರಡನೇ ಓಡಿಐ ಪಂದ್ಯದಲ್ಲಿ ಮೂರು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದ ಶಿಖರ್ ಧವನ್‌ ನಾಯಕತ್ವದ ಭಾರತ ತಂಡಕ್ಕೆ ಟೀಂ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಇಂಗ್ಲೆಂಡ್‌ನಿಂದ ವಿಶೇಷ ಸಂದೇಶ ರವಾನಿಸಿದ್ದಾರೆ.

ನಮ್ಮ ಹುಡುಗರಿಂದ ಅದ್ಭುತ ಗೆಲುವು. ಕಠಿಣ ಸನ್ನಿವೇಶದ ಹೊರತಾಗಿಯೂ ತಂಡ ಅತ್ಯುತ್ತಮ ಪ್ರಯತ್ನ ನಡೆಸಿ ಪಂದ್ಯ ಗೆದ್ದು ಕೊಂಡಿದೆ. ನಿಜಕ್ಕೂ ಪಂದ್ಯ ವೀಕ್ಷಿಸಲು ಅದ್ಭುತವಾಗಿತ್ತು. ಒತ್ತಡದ ಸನ್ನಿವೇಶದಲ್ಲಿ ಅತ್ಯುತ್ತಮ ಬ್ಯಾಟ್‌ ಮಾಡಿದ್ದೀರಿ, ವೆಲ್‌ ಡನ್‌ ದೀಪಕ್‌ ಚಹರ್‌ ಹಾಗೂ ಸೂರ್ಯಕುಮಾರ್‌ ಯಾದವ್‌,” ಎಂದು ವಿರಾಟ್‌ ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.

ಕೊಲಂಬೊದ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಶ್ರೀಲಂಕಾ ನೀಡಿದ್ದ 276 ರನ್‌ ಗುರಿ ಹಿಂಬಾಲಿಸಿದ್ದ ಭಾರತ ತಂಡ, ಸೂರ್ಯಕುಮಾರ್‌ ಯಾದವ್‌ ಅವರ ಅರ್ಧಶತಕದ ಹೊರತಾಗಿಯೂ ಒಂದು ಹಂತದಲ್ಲಿ 160 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ದೀಪಕ್‌ ಚಹರ್‌ ಹಾಗೂ ಕೃಣಾಲ್‌ ಪಾಂಡ್ಯ ಕೆಲ ಕಾಲ ಅತ್ಯುತ್ತಮ ಜತೆಯಾಟವಾಡಿದ್ದರು. ಆದರೆ, ಕೃಣಾಲ್‌ ವಿಕೆಟ್‌ ಒಪ್ಪಿಸಿದ ಬಳಿಕ ಜವಾಬ್ದಾರಿ ಹೊತ್ತುಕೊಂಡ ದೀಪಕ್‌ ಚಹರ್(69*) ಹಾಗೂ ಭುವನೇಶ್ವರ್‌ ಕುಮಾರ್‌(19*) 83 ರನ್‌ ಜೊತೆಯಾಟವಾಡುವ ಮೂಲಕ ಭಾರತದ ರೋಚಕ ಗೆಲುವಿಗೆ ಸಾಕ್ಷಿಯಾದರು. ಅಲ್ಲದೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ.

ಅಭ್ಯಾಸ ಪಂದ್ಯದಿಂದ ದೂರ ಉಳಿದ ಕೊಹ್ಲಿ: ಪ್ರಸ್ತುತ ಭಾರತ ತಂಡ ಕೌಂಟಿ ಚಾಂಪಿಯನ್‌ಷಿಪ್‌ ಇಲೆವೆನ್‌ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ತೊಡಗಿದೆ. ಆದರೆ ಬೆನ್ನು ನೋವಿನ ಕಾರಣ ನಾಯಕ ವಿರಾಟ್‌ ಕೊಹ್ಲಿ ಈ ಪಂದ್ಯದಿಂದ ದೂರ ಉಳಿದಿದ್ದಾರೆ.

ಕಳೆದ ಸೋಮವಾರ ಸಂಜೆಯಿಂದ ನಾಯಕ ವಿರಾಟ್‌ ಕೊಹ್ಲಿ ಬೆನ್ನು ನೋವು ಅನಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೌಂಟಿ ಇಲೆವೆನ್‌ ವಿರುದ್ಧದ ಮೂರು ದಿನಗಳ ಅಭ್ಯಾಸದಿಂದ ವಿಶ್ರಾಂತಿ ಪಡೆಯುವಂತೆ ಬಿಸಿಸಿಐ ವೈದ್ಯಕೀಯ ತಂಡ ಸಲಹೆ ನೀಡಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಕೌಂಟಿ ಇಲೆವೆನ್‌ ವಿರುದ್ಧದ ಅಭ್ಯಾಸ ಪಂದ್ಯದ ಮೊದಲನೇ ದಿನದ ಅಂತ್ಯಕ್ಕೆ ಭಾರತ ತಂಡ 9 ವಿಕೆಟ್‌ ಕಳೆದುಕೊಂಡು 306 ರನ್‌ ಗಳಿಸಿದೆ. ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಕೆ.ಎಲ್‌ ರಾಹುಲ್‌ ಭರ್ಜರಿ ಶತಕ ಸಿಡಿಸಿದರು ಹಾಗೂ ರವೀಂದ್ರ ಜಡೇಜಾ 75 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: