ಮೈಸೂರು

ಎಸ್ ಎಸ್ ಎಲ್ ಸಿ ಭಾಷಾ ವಿಷಯದಲ್ಲಿ ಪರೀಕ್ಷೆ

ಮೈಸೂರು,ಜು.22:- ಇಂದೂ ಕೂಡ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳ ಪರೀಕ್ಷೆ ನಡೆದಿದ್ದು, ಪೊಲೀಸ್ ಬಂದೋಬಸ್ತ್ ಮತ್ತು ಕೊರೋನಾ ಮುಂಜಾಗ್ರತಾ ಕ್ರಮದಡಿಯಲ್ಲಿಯೇ ಪರೀಕ್ಷೆ ನಡೆಯುತ್ತಿದೆ.

ಮೈಸೂರು ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ 39,989ಮಂದಿ ಪರೀಕ್ಷಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 37,474ಸಾಮಾನ್ಯ ವಿದ್ಯಾರ್ಥಿಗಳು. 1,081 ಖಾಸಗಿ ಹಾಗೂ 434ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.  6,619 ಪರೀಕ್ಷಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಾಯಂಕಾಲದ ವೇಳೆ ಇದರಲ್ಲಿ ಗೈರು ಹಾಜರಾದವರ ಮಾಹಿತಿ ಲಭ್ಯವಾಗಲಿದೆ. ಮೈಸೂರು ನಗರ ವ್ಯಾಪ್ತಿಯಲ್ಲಿ 10ಸಾವಿರಕ್ಕಿಂತ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಮೈಸೂರು ಉತ್ತರ ವಲಯದಲ್ಲಿ 6,601 ಹಾಗೂ ದಕ್ಷಿಣ ವಲಯದಲ್ಲಿ 5,481 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 237 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಮೈಸೂರು ನಗರದಲ್ಲಿ ಒಟ್ಟು 87ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಇಂದು ಭಾಷಾ ವಿಷಯದಲ್ಲಿ ಪರೀಕ್ಷೆ ನಡೆಯುತ್ತಿದ್ದು, ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಪರೀಕ್ಷೆಗಳು ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ.  ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷೆಯನ್ನು ಸರಳೀಕರಣಗೊಳಿಸಿ ಹೊಸ ಮಾದರಿಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ.  8.30ರಿಂದಲೇ ಪರೀಕ್ಷಾ ಕೇಂದ್ರಗಳು ತೆರೆದಿದ್ದು, ಬಂದ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ನಡೆಸಿ, ಕೈಗಳಿಗೆ ಸ್ಯಾನಿಟೈಸರ್ ಹಾಕಿ ಕಳುಹಿಸುತ್ತಿರುವುದು ಕಂಡು ಬಂತು. ಎಲ್ಲಾ ಪರೀಕ್ಷಾ ಕೇಂದ್ರಗಳ ಬಳಿಯೂ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿರುವುದು ಕಂಡು ಬಂತು. 10.30 ಕ್ಕೆ ಪ್ರಶ್ನೆ ಪತ್ರಿಕೆ, ಒಎಂಆರ್ ಶೀಟ್ ನೀಡಲಾಗಿದೆ. ಮಧ್ಯಾಹ್ನ 1.30ಕ್ಕೆ ಪರೀಕ್ಷೆ ಮುಗಿಯಲಿದೆ.

ಪರೀಕ್ಷಾ ಕೇಂದ್ರದ 200ಮೀಟರ್ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಅಲ್ಲಿ ಯಾವುದೇ ವಾಹನಗಳ ಪ್ರವೇಶ, ಅಂಗಡಿ ಮುಂಗಟ್ಟು ತೆರೆಯುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ ಖಾಕಿ ಸರ್ಪಗಾವಲಿದೆ.

ಇಂದು ಬೆಳಿಗ್ಗೆ ತಮ್ಮ ವಾಹನಗಳಲ್ಲಿ ಮಕ್ಕಳನ್ನು ಕರೆತಂದ ಪೋಷಕರು 200 ಮೀಟರ್ ವ್ಯಾಪ್ತಿಯಲ್ಲಿಯೇ ಮಕ್ಕಳನ್ನು ಬಿಟ್ಟು ಆಲ್ ದಿ ಬೆಸ್ಟ್ ಎಂದು ಹೇಳಿ ತೆರಳುತ್ತಿರುವುದು ಕಂಡು ಬಂತು.  ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಮುಕ್ತಾಯಗೊಳ್ಳಲಿದೆ. ಜು.19ರಂದು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದಲ್ಲಿ ಪರೀಕ್ಷೆ ನಡೆದಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: