ದೇಶಪ್ರಮುಖ ಸುದ್ದಿ

ನಾಳೆ ನವಜೋತ್ ಸಿಂಗ್ ಸಿಧು ಅಧಿಕಾರ ಸ್ವೀಕಾರ; ಸಿಎಂಗೆ ಆಹ್ವಾನ ನೀಡುವ ಸಾಧ್ಯತೆ

ಚಂಡೀಗಢ,ಜು.22-ಪಂಜಾಬ್ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನವಜೋತ್ ಸಿಂಗ್ ಸಿಧು ನಾಳೆ (ಶುಕ್ರವಾರ) ಅಧಿಕಾರ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೂ ಆಹ್ವಾನ ನೀಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಅಮೃತಸರದಲ್ಲಿ ಪಕ್ಷದ ಮುಖಂಡರೊಬ್ಬರ ಹೇಳಿಕೆ ಪ್ರಕಾರ, ಸಿಧು ಹಾಗೂ ನಾಲ್ವರು ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದ್ದಾರೆ. ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಸೇರಿದಂತೆ ಕಾಂಗ್ರೆಸ್ ಪ್ರಮುಖ ಮುಖಂಡರು ಹಾಜರಾಗುವ ಸಾಧ್ಯತೆಯಿದೆ.

ಅಮರಿಂದರ್ ಸಿಂಗ್ ಅವರ ತೀವ್ರ ವಿರೋಧದ ನಡುವೆಯೂ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿ ಸಿಧು ಅವರನ್ನು ವರಿಷ್ಠರು ಆಯ್ಕೆ ಮಾಡಿದ್ದಾರೆ. ಇದರಿಂದಾಗಿ ಪಂಜಾಬ್ ಕಾಂಗ್ರೆಸ್‌ನಲ್ಲಿ ಆಂತರಿಕ ಬಿಕ್ಕಟ್ಟು ಮುಂದುವರಿದಿದೆ. ವೈಯಕ್ತಿಕ ಅವಹೇಳನಕಾರಿ ಟ್ವೀಟ್‌ಗೆ ಸಂಬಂಧಿಸಿದಂತೆ ಸಿಧು ಸಾರ್ವಜನಿಕವಾಗಿ ಕ್ಷಮೆಯಾಚಿಸುವವರೆಗೂ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಭೇಟಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ಸ್ಪಷ್ಟಪಡಿಸಿದ್ದರು.

ಅತ್ತ 60ಕ್ಕೂ ಹೆಚ್ಚು ಶಾಸಕರ ಜೊತೆಗೆ ಸಭೆ ನಡೆಸಿರುವ ನವಜೋತ್ ಸಿಂಗ್ ಸಿಧು, ಬಲ ಪ್ರದರ್ಶಿಸಿದ್ದರು. ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರಸ್‌ನ 80 ಶಾಸಕರಿದ್ದಾರೆ. ಸಿಧು ಈಗಾಗಲೇ ಹಲವಾರು ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: