ದೇಶಪ್ರಮುಖ ಸುದ್ದಿ

ನೂತನ ಕೃಷಿ ಕಾಯ್ದೆ ವಿರುದ್ಧ ಜಂತರ್ ಮಂತರ್‌ನಲ್ಲಿ ರೈತರ ಪ್ರತಿಭಟನೆ: ಗಡಿ ಭಾಗಗಳಲ್ಲಿ ಭಾರಿ ಭದ್ರತೆ

ನವದೆಹಲಿ,ಜು.22-ಮುಂಗಾರು ಅಧಿವೇಶನದ ನಡುವೆ ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ಇಂದು ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಪ್ರತಿಭಟನೆ ನಡೆಸಲು ರೈತರಿಗೆ ದಿಲ್ಲಿ ಪೊಲೀಸರು ಅನುಮತಿ ನೀಡಿದ್ದಾರೆ. ಎಲ್ಲಾ ಕೋವಿಡ್ 19 ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂಬ ಷರತ್ತಿನೊಂಡಿಗೆ ದಿಲ್ಲಿ ಸರಕಾರ ಕೂಡ ರೈತರ ಪ್ರತಿಭಟನೆಗೆ ಅನುಮತಿ ನೀಡಿದೆ.

ಕಾಯ್ದೆಗಳ ವಿರುದ್ಧ ದಿಲ್ಲಿಯ ಸುತ್ತಮುತ್ತಲೂ ಅನೇಕ ಭಾಗಗಳಲ್ಲಿ ರೈತರ ಪ್ರತಿಭಟನೆ ನಡೆಯುತ್ತಿವೆ. ಈ ವಿಭಿನ್ನ ಪ್ರತಿಭಟನಾ ಸ್ಥಳಗಳಿಂದ ರೈತರು ಸಿಂಘು ಗಡಿಯಲ್ಲಿ ಸೇರಲಿದ್ದು, ಅಲ್ಲಿಂದ ಜಂತರ್ ಮಂತರ್‌ನತ್ತ ಮೆರವಣಿಗೆ ಸಾಗಲಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸಿಂಘು ಗಡಿ ಮತ್ತು ಜಂತರ್ ಮಂತರ್ ಪ್ರದೇಶದಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿದೆ.

ಪ್ರತಿಭಟನೆಯಲ್ಲಿ ಭಾಗವಹಿಸುವ ಜನರ ಸಂಖ್ಯೆಗೆ ಮಿತಿ ಹೇರಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಗರಿಷ್ಠ 200 ಸದಸ್ಯರು, ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ (ಕೆಎಂಎಸ್‌ಸಿ) ಗರಿಷ್ಠ ಆರು ಮಂದಿಗಿಂತ ಹೆಚ್ಚಿಲ್ಲದಂತೆ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ. ಪ್ರತಿ ದಿನ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ.

ಸಿಂಘು ಗಡಿಯಿಂದ ಬಸ್‌ಗಳಲ್ಲಿ ಜಂತರ್ ಮಂತರ್‌ನ ಸೂಚಿತ ಪ್ರತಿಭಟನಾ ಸ್ಥಳಕ್ಕೆ ರೈತರನ್ನು ಪೊಲೀಸ್ ಬೆಂಗಾವಲಿನಲ್ಲಿ ಕರೆತರಲಾಗುವುದು. ಗುರುತಿನ ಚೀಟಿ ಹೊಂದಿರುವ ರೈತರಿಗೆ ಮಾತ್ರವೇ ಪ್ರತಿಭಟನಾ ಸ್ಥಳಕ್ಕೆ ಪ್ರವೇಶ ನೀಡಲಾಗುವುದು. ಸಂಜೆ 5 ಗಂಟೆಯ ವೇಳೆಗೆ ರೈತರನ್ನು ಪುನಃ ಪೊಲೀಸರ ಬೆಂಗಾವಲಿನಲ್ಲಿ ಮರಳಿ ಕರೆದುಕೊಂಡು ಹೋಗಲಾಗುವುದು ಎಂದು ದಿಲ್ಲಿ ಪೊಲೀಸರ ಹೇಳಿಕೆ ತಿಳಿಸಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: