ಮೈಸೂರು

ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೂ ಲ್ಯಾಪ್ ಟಾಪ್ ನೀಡುವಂತೆ ಮನವಿ

ಮೈಸೂರು,ಜು.22:-  ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೂ ಲ್ಯಾಪ್ ಟಾಪ್ ನೀಡುವಂತೆ ಕರ್ನಾಟಕ ರಾಜ್ಯ ಪದವಿಪೂರ್ವ ಉಪನ್ಯಾಸಕರ ಸಂಘದ ನಗರ ಅಧ್ಯಕ್ಷರಾದ ಎನ್.ಎಸ್.ಪಶುಪತಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ.

ಮನವಿಯಲ್ಲಿ ಅವರು   ಕರ್ನಾಟಕ ಸರ್ಕಾರ ಪದವಿ, ಇಂಜಿನಿಯರ್, ಡಿಪ್ಲೋಮ ಹಾಗೂ ಇನ್ನಿತರ ವಿಭಾಗಗಳಿಗೆ ಶಿಕ್ಷಣ ಇಲಾಖೆಯ ಉಚಿತವಾಗಿ ಲ್ಯಾಪ್‌ಟಾಪ್ ನೀಡಿ, ಶಿಕ್ಷಣವನ್ನು ಮುಂದುವರಿಸಲು ಉತ್ತೇಜನ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಹಾಗೂ ಸಂತಸದ ವಿಷಯವಾಗಿದೆ.

ಇದೇ  ರೀತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್ ನೀಡಲು ಮನವಿ ಮಾಡುತ್ತಿದ್ದೇನೆ.  ಈಗಾಗಲೇ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇಕಡ 50 ರಿಂದ 60 ರಷ್ಟು ಗ್ರಾಮೀಣ ಪ್ರದೇಶದ ಮಕ್ಕಳು ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾರೆ. ಇವರಿಗೆ ಈ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತರಗತಿಗಳಲ್ಲಿ ಪಾಠ, ಪ್ರವಚನಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿರುವುದಿಲ್ಲ. ಆದರೆ ಆನ್‌ ಲೈನ್‌ ನಲ್ಲಿ ವಿದ್ಯಾರ್ಥಿಗಳಿಗೆ ಪಾಠವನ್ನು ಪ್ರತಿ ನಿತ್ಯ ಭೋದಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಹೆಚ್ಚು ಜನ ಬಡ ಹಾಗೂ ಹಿಂದುಳಿದ ವರ್ಗದವರಾಗಿದ್ದು, ಮೊಬೈಲ್ ತೆಗೆದುಕೊಳ್ಳಲು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಮೊಬೈಲ್‌ ನಲ್ಲಿ ಆನ್‌ ಲೈನ್‌ ತರಗತಿಗಳನ್ನು ವೀಕ್ಷಿಸಲು ಸಾಧ್ಯವಾಗದೆ ಪಾಠ ಪ್ರವಚನಗಳಿಂದ ವಂಚಿತರಾಗುತ್ತಿದ್ದಾರೆ.

ಸರ್ಕಾರ ಮತ್ತು ಶಿಕ್ಷಣ ಇಲಾಖೆ ಆನ್‌ ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವೃಂದಕ್ಕೆ ಉಚಿತ ಲ್ಯಾಪ್‌ಟಾಪ್ ವ್ಯವಸ್ಥೆಯನ್ನು ತುರ್ತಾಗಿ ಒದಗಿಸಿದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣವನ್ನು ಪಡೆದು ವಿದ್ಯಾಭ್ಯಾಸವನ್ನು ಮುಂದುವರಿಸಲು ಸಹಾಯವಾಗುತ್ತದೆ.  ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: