ಮೈಸೂರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಐಟಿಐ ಅತಿಥಿ ಬೋಧಕರ ಪ್ರತಿಭಟನೆ

ಮೈಸೂರು,ಜು.22:- ರಾಜ್ಯ ಐಟಿಐ, ಅತಿಥಿ ಬೋಧಕರ ಹೋರಾಟ ಸಮಿತಿ ವತಿಯಿಂದ ರಾಜ್ಯದಾದ್ಯಂತ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಗಳ ಮುಂದೆ ಐಟಿಐ ಅತಿಥಿ ಬೋಧಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸತ್ಯಾಗ್ರಹ ನಡೆಸುತ್ತಿದ್ದು, ಮೈಸೂರಿನಲ್ಲಿಯೂ ಸರ್ಕಾರಿ ಕೈಗಾರಿಕಾ ತರಬೇತಿ ಅತಿಥಿ ಬೋಧಕರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ ಐಟಿಐ ಗಳಲ್ಲಿ 900ಕ್ಕೂ ಹೆಚ್ಚು ಅತಿಥಿ ಬೋಧಕರು ಕೆಲಸ ನಿರ್ವಹಿಸುತ್ತಿದ್ದೇವೆ. ಕಳೆದ ವರ್ಷ ದೇಶಕ್ಕೆ ಬಂದ ಕೊರೋನಾದಿಂದ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದೀಗ ಎರಡನೇ ಅಲೆಯಿಂದಾಗಿ ಲಾಕ್ ಡೌನ್ ತಿಂಗಳ ವೇತನವಿಲ್ಲದೆ ಜೀವನ ದುಸ್ತರವಾಗಿದೆ. ತರಬೇತಿದಾರರ ಹಿತದೃಷ್ಟಿಯಿಂದ ಲಾಕ್ ಡೌನ್ ಸಮಯದಲ್ಲಿ ನಮ್ಮದೇ ಹಣ ಭರಿಸಿ ಆನ್ಲೈನ್ ಪಾಠವನ್ನೂ ಮಾಡಿದ್ದೇವೆ. ಎಲ್ಲ ವಿದ್ಯಾರ್ಹತೆ ಹೊಂದಿ 10-15 ವರ್ಷಗಳಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದವರ ಎಷ್ಟೋ ಜನರ ಸೇವೆ ಕಡಿತಗೊಂಡಿದ್ದು ಇನ್ನು ಹಲವರು ವಯೋಮಿತಿ ಮೀರುತ್ತಿರುವುದರಿಂದ ಅಭದ್ರತೆಯಲ್ಲಿ ಸಿಲುಕಿದ್ದಾರೆ. ದಿನಕ್ಕೆ ನಾಲ್ಕು ಗಂಟೆಯಂತೆ ಗಂಟೆಗೆ 100ರೂ.ಗಳಂತೆ ತಿಂಗಳಿಗೆ 9,600ರೂ.ಸಂಭಾವನೆ ಅತ್ಯಂತ ಕಡಿಮೆ ಆಗಿದ್ದು ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಪ್ರಾಯೋಗಿಕ ಪಾಠ ಮಾಡುವುದರಿಂದ   ದಿನಕ್ಕೆ 6ಗಂಟೆಗಳೂ ಮೀರಿ ಬೋಧನೆ ಮಾಡಬೇಕಾಗಿದ್ದು ಜೀವನಕ್ಕೆ ಇದೇ ಆಧಾರವಾಗಿರುತ್ತದೆ. ನಮ್ಮನ್ನು ಅತಿಥಿ ಬೋಧಕರು ಎಂದು ಕರೆಯುವ ಪದ್ಧತಿ ಚಾಲ್ತಿಯಲ್ಲಿರುವುದು ದುರಂತ. ನಮಗೆ ಸಂಬಳಕ್ಕೆ ಬದಲಿಗೆ ಕೇವಲ ಗೌರವಧನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ದಾಖಲಾದ ಸಂದರ್ಭದಲ್ಲಿ ಮಾತ್ರ ಸೇವೆಗೆ ಅತಿಥಿ ಬೋಧಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಪ್ರತಿ ತಿಂಗಳಂತೆ ವೇತನ ಸರಿಯಾಗಿ ಸಿಗದೆ ಜೀವನ ನಡೆಸುವುದು ಕಷ್ಟವಾಗಿದೆ. ಹೆರಿಗೆ ಭತ್ಯೆ ಕೂಡ ಕಲ್ಪಿಸಿಲ್ಲ. ವೃತ್ತಿಪರ ಪರೀಕ್ಷೆಗಳು ನಡೆಯುವ ಸಂದರ್ಭದಲ್ಲಿ ಅತಿಥಿ ಬೋಧಕರ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಯಾವುದೇ ಗೌರವ ಧನ ಕೂಡ ಇಲ್ಲ. ಕೆಪಿಎಸ್ ಸಿ ಮೂಲಕ ಸರ್ಕಾರಿ ಐಟಿಐ ಕಾಲೇಜುಗಳಲ್ಲಿ 1520ಕಿರಿಯ ತರಬೇತಿ ಅಧಿಕಾರಿಗಳ ನೇಮಕಾತಿ ಮಾಡಲು ಪ್ರಕ್ರಿಯೆ ಜರುಗುತ್ತಿದೆ. ಮುಂದೆ ಇವರುಗಳಿಗೆ ಸ್ಥಳ ನಿಯುಕ್ತಿ ಆದರೆ ಈಗ ಕಾರ್ಯ ನಿರ್ವಹಿಸುತ್ತಿರುವ ನೂರಾರು ಅತಿಥಿ ಬೋಧಕರು ಕೆಲಸದ ಭದ್ರತೆ ಇಲ್ಲದೆ ಬೀದಿ ಪಾಲಾಗುತ್ತಾರೆ. ಅತಿಥಿ ಬೋಧಕರ ಜೀವನ ಶೋಚನೀಯವಾಗಿದೆ. ಹೀಗಾಗಿ ಕೂಡಲೇ ಮನವಿಯನ್ನು ಪರಿಶೀಲಿಸಿ ಸರ್ಕಾರಿ ಐಟಿಐಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಬೋಧಕರ ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.

2019-20 ಮತ್ತು 2020-21 ಸಾಲಿನ ಲಾಕ್ ಡೌನ್ ಅವಧಿಯ ಅತಿಥಿ ಬೋಧಕರ ಸಂಬಳವನ್ನು ಈ ಕೂಡಲೇ ನೀಡಬೇಕು. ಅತಿಥಿ ಬೋಧಕರ ಸೇವಾ ಭದ್ರತೆ ಮತ್ತು ವೈದ್ಯಕೀಯ ಭದ್ರತೆ ಖಾತ್ರಿ ಪಡಿಸಬೇಕು.  ಡಿಜಿಇಟಿರವರ ಆಗ್ರಹದಂತೆ ಸರ್ಕಾರದಲ್ಲಿ ನಿಯಮಿತ ವೃತ್ತಿಪರ ಬೋಧಕರ ಸಂಭಾವನೆಯ 2/3 ಭಾಗದ ಕನಿಷ್ಠ ವೇತನವನ್ನು ನಿಗದಿಪಡಿಸಬೇಕು. ಕೊರೋನಾದಿಂದ ಮೃತಪಟ್ಟ ಅತಿಥಿ ಬೋಧಕರಿಗೆ ತಕ್ಷಣವೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಬ್ಲೀನ್ ತಾಜ್, ಕುಮಾರ್ ಎಂ.ಎಂ, ನೀತು, ಸುನಿಲ್, ರಾಜೇಶ್, ವೆಂಕಟೇಶ್, ಪ್ರೇಮಾಂಜಲಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: