ಮೈಸೂರು

ಕನ್ನಡಿಗರು,ಪರಭಾಷಿಕರು ಕಡ್ಡಾಯವಾಗಿ ಕನ್ನಡ ಬಳಸಲು ಆಗ್ರಹಿಸಿ ಆ.6ರಂದು ಆಂದೋಲನ ಕ್ಕೆ ಚಾಲನೆ

ಮೈಸೂರು, ಜು,24:-  ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡ ಬಳಸದೆ ಇರುವ ಕನ್ನಡಿಗರು, ಕನ್ನಡ ಬಳಸದೆ ಇರುವ ಪರಭಾಷಿಕರು ಕಡ್ಡಾಯವಾಗಿ ಕನ್ನಡ ಬಳಸಲು ಆಗ್ರಹಿಸಿ ಆಂದೋಲನ ಕ್ಕೆ  ಆ.6ರಂದು ಚಿತ್ರದುರ್ಗದಲ್ಲಿ ಚಾಲನೆ ನೀಡಲಾಗುತ್ತಿದ್ದು, ಬಳಿಕ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಕದಂಬ ಸೈನ್ಯ ಕನ್ನಡ ಸಂಘಟನೆ  ರಾಜ್ಯಾ ಧ್ಯಕ್ಷ ಬೇಕಿ ರಮೇಶ್ ತಿಳಿಸಿದರು.

ಮೈಸೂರು ಪತ್ರಕರ್ತರ ಸಂಘದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸದೃಢ ಕರ್ನಾಟಕಕ್ಕಾಗಿ ಬಲಿಷ್ಠ ಕನ್ನಡಿಗರ ಸೃಷ್ಟಿ, ಕನ್ನಡಿಗ ಸದೃಢನಾದರೆ, ಕನ್ನಡ ಕರ್ನಾಟಕ ಬಲಿಷ್ಠವಾಗಿ ಸದೃಢಗೊಳ್ಳುತ್ತದೆ. ಕನ್ನಡ ನೆಲದ ನಟ-ನಟಿಯರು ಕನ್ನಡವನ್ನು ಕಡ್ಡಾಯವಾಗಿ ಮಾತನಾಡಲೇಬೇಕು. ನಿಮ್ಮ ಅಭಿಮಾನಿಗಳಿಗೂ ಕರೆ ನೀಡಬೇಕು, ನಟ ಉರ್ವಭೌಮ ಪದ್ಯಭೂಷಣ ಡಾ.ರಾಜಕುಮಾರ್‌ರವರೇ ಸ್ಫೂರ್ತಿ ಎಂದರು.

ಕನ್ನಡ ನೆಲದ ರಾಜಕಾರಣಿಗಳು ಕಡ್ಡಾಯವಾಗಿ ಕನ್ನಡ ಮಾತನಾಡಲೇಬೇಕು, ವ್ಯವಹರಿಸಬೇಕು. ನಿಮ್ಮ ಅನುಯಾಯಿಗಳಿಗೆ ಕರೆ ನೀಡಬೇಕು, ಕನ್ನಡ ನೆಲದ ಉನ್ನತ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಕನ್ನಡ ಮಾತನಾಡಬೇಕು ಮತ್ತು ವ್ಯವಹರಿಸಬೇಕು, ಕರ್ನಟಕದ ಎಲ್ಲಾ ಸರ್ಕಾರಿ ನೌಕರರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂಬ ಕಾಯಿದೆ ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು   ಆಗ್ರಹಿಸಿದರು.

ಕನ್ನಡ ನೆಲದ ಕೇಂದ್ರ ಸರ್ಕಾರದ ಕಚೇರಿಗಳು, ಬ್ಯಾಂಕುಗಳು ಕನ್ನಡಿಗರಿಗೆ ಉದ್ಯೋಗ ನೀಡಬೇಕು ಪರಭಾಷಿಕರಿಗೆಲ್ಲ ಕನ್ನಡ ಬಳಸಬೇಕು ಹಾಗೂ ವ್ಯವಹರಿಸಬೇಕು. ಸರ್ಕಾರಿ ವಾಹನಗಳಿಗೆ ಮಾತ್ರ ಕನ್ನಡ ಮತ್ತು ಆಂಗ್ಲ ಭಾಷೆಯ ಅಂಕಿಗಳಿವೆ, ಖಾಸಗಿ ವಾಹನಗಳಿಗೂ ಕೂಡ ಕಡ್ಡಾಯವಾಗಿ ಕನ್ನಡ ಮತ್ತು ಆಂಗ್ಲ ಭಾಷೆಯ ಅಂಕಿಗಳನ್ನು ಬಳಸುವಂತೆ ನಿಯಮ ಜಾರಿಗೆ ತರಬೇಕು. ಕನ್ನಡ ನೆಲದ ಸರ್ಕಾರಿ ಅಕಾಡೆಮಿಗಳು ಕನ್ನಡ ಸಂಸ್ಕೃತಿ ಬೆಳೆಸುತ್ತಿಲ್ಲ. ಈಗ ರಾಜಕೀಯ ಪ್ರೇರಿತ ಆಕಾಡೆಮಿಗಳಾಗಿವೆ. ಕನ್ನಡಿಗರಿಗೆ ಮುಟ್ಟುವಂತಹ ಯಾವುದೇ ಕಾರ್ಯ ಮಾಡುತ್ತಿಲ್ಲ, ಆದ್ದರಿಂದ ಆಕಾಡೆಮಿಗಳನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ನಾವು ಕನ್ನಡಿಗರು ಎಂದು ಸ್ವಾಭಿಮಾನದಿಂದ ಹೇಳಬೇಕು. ಆಮೇಲೆ ನಿಮ್ಮ ಜನಾಂಗದ ಹೆಸರು ಹೇಳಿಕೊಳ್ಳಿ. ನಾವು ಮೊದಲು ಕನ್ನಡಿಗರು ನಂತರ ಭಾರತೀಯರು, ಕನ್ನಡ ನೆಲದಲ್ಲಿ ಬದುಕು ಸಾಗಿಸುತ್ತಿರುವ ಹಿಂದಿ, ತಮಿಳು, ಉರ್ದು, ತೆಲುಗು, ಇಂಗ್ಲೀಷ್, ರಾಜಸ್ಥಾನಿ, ಮರಾಠಿ ಮತ್ತಿತರ ಭಾಷಿಕರು ಸಾರ್ವತ್ರಿಕವಾಗಿ ಕನ್ನಡ ಮಾತನಾಡಬೇಕು ಹಾಗೂ ವ್ಯವಹರಿಸಬೇಕು, ನಿಮ್ಮ ಭಾಷೆ ಪ್ರೀತಿಸಿ, ನಿಮ್ಮ ಜೀವ ಭಾಷೆ ಕನ್ನಡ ಬೇಡವೆ ಎಂದು ಪ್ರಶ್ನಿಸಿದರು.

ಕರ್ನಾಟಕದ ಕನ್ನಡಿಗರ ಅಭಿಮಾನವೇ ಅದರ ಅಸ್ತಿತ್ವದ ದಾರಿದೀಪ. ಎರಡು ಶತಮಾನ ಬ್ರಿಟಿಷರ ಆಡಳಿತದಲ್ಲೂ ಕನ್ನಡ ಅಳಿಯಲಿಲ್ಲ. ಆದರೆ ಕನ್ನಡಿಗರ ಸರ್ಕಾರಗಳಲ್ಲೇ ಸಂಪೂರ್ಣವಾಗಿ ಕಡೆಗಣನೆಯಾಗಿದೆ.  ದುರಾದೃಷ್ಟಕರವೆಂದರೆ  ಬಹುತೇಕ ಕನ್ನಡಿಗರಷ್ಟು ಪರಭಾಷೆ ವ್ಯಾಮೋಹಿಗಳು ಯಾವ ಭಾಷೆಯವರು ಇಲ್ಲ. ಕನ್ನಡಿಗರು ಸಾರ್ವತ್ರಿಕವಾಗಿ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು ಹಾಗೂ ವ್ಯವಹರಿಸಬೇಕು, ಕನ್ನಡವು ಅನ್ಯ ಭಾಷೆಗಳಿಗೆ ಆಹಾರವಾಗದಂತೆ ನೋಡಿಕೊಳ್ಳಬೇಕು.

ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು-ವ್ಯವಹರಿಸಬೇಕು. ಸರ್ಕಾರಿ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಬಳಕೆಯು ವಿಸ್ತಾರವಾಗುವಂತೆ ಮಾಡಬೇಕು.

ಕನ್ನಡಿಗರ ಉದ್ಯೋಗದಾತೆ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ 2017ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರೂ ಇಲ್ಲಿವರೆಗೆ ಕಾಯಿದೆಯಾಗಿ ಜಾರಿಗೆ ಬಂದಿಲ್ಲ ಎಂದು   ಆರೋಪಿಸಿದರು.

ಕನ್ನಡ ಕನ್ನಡಿಗರ ಬಗ್ಗೆ ಸರ್ಕಾರಗಳು ತಾತ್ಸಾರ ಮನೋಭಾವ ತೋರುತ್ತಿರುವುದರಿಂದ ಸಮಸ್ತ ಕನ್ನಡಿಗರು ಅಂಥ ಸರ್ಕಾರಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲೇಬೇಕು. ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡ ಬಳಸದೆ ಇರುವ ಕನ್ನಡಿಗರು, ಕನ್ನಡ ಬಳಸದೆ ಇರುವ ಪರಭಾಷಿಕರು ಕಡ್ಡಾಯವಾಗಿ ಕನ್ನಡ ಬಳಸಲು ಆಗ್ರಹಿಸಿ ಆಂದೋಲನವನ್ನು ಆ.  6ರಂದು ಗಂಡುಮೆಟ್ಟಿನ ನಾಡು ಚಿತ್ರದುರ್ಗದಿಂದ ಪ್ರಾರಂಭಿಸಲಾಗುವುದು. ನಂತರ ರಾಜ್ಯಾದ್ಯಂತ ಈ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಎಸ್.ಶಿವಕುಮಾರ್, ರಾಜ್ಯ ಸಹಕಾರ್ಯದರ್ಶಿ ವಿ.ಶಿವಕುಮಾರ್‌ ಮೈಸೂರು, ಮೈಸೂರು ಜಿಲ್ಲಾಧ್ಯಕ್ಷ ಎ.ನಾಗೇಂದ್ರ ಚಾಮರಾಜನಗರ ಉಸ್ತುವಾರಿ ಎನ್.ವೆಂಕಟೇಶ್, ಬೆಂಗಳೂರು ಮಹಾನಗರ ಸಂಚಾಲಕ ಸೂರಜ್‌ ಕುಮಾರ್‌ ಗೌಡ, ಕಾರ್ಯದರ್ಶಿ ಮಹೇಶ್ ಚೇರನಹಳ್ಳಿ, ಮಂಡ್ಯ ಜಿಲ್ಲಾಧ್ಯಕ್ಷ ಭಗವಾನ್, ರಾಜ್ಯ ಸಮಿತಿ ಸದಸ್ಯ ನಾಗೇಶ್ ಉಮ್ಮಡಹಳ್ಳಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: