
ಮೈಸೂರು
ಕಲಾವಿದರಿಗಾಗಿ ಆನ್ಲೈನ್ ಕಾನ್ಸರ್ಟ್ ಸೀರಿಸ್ ಬಿಡುಗಡೆ : ಕಲಾಸಮರ್ಪಣೆ ಕಾರ್ಯಕ್ರಮ ಪ್ರಸಾರಣ
ಮೈಸೂರು,ಜು.24:- ಮೈಸೂರು ಸಂಸ್ಥಾನ ಕಲಾವಿದರಿಗೆ ಕಲಾಸಂಸ್ಕೃತಿಗೆ ಮಹತ್ವದ ಪ್ರಾಧಾನ್ಯತೆ ನೀಡಿದೆ. ಅದರಲ್ಲೂ ಪಕ್ಕವಾದ್ಯ ಕಲಾವಿದರು ಹಾಡುಗಾರರು ಮೈಸೂರಿನಿಂದ ವಿಶ್ವದೆಲ್ಲಡೆ ಜನಪ್ರಿಯಗೊಂಡು ಮೈಸೂರಿನ ಸಾಂಸ್ಕೃತಿಕ ಹಿರಿಮೆಯನ್ನು ಶ್ರೀಮಂತಗೊಳಿಸುತ್ತಿದಾರೆ. ಇಂತಹ ಅನೇಕ ಕಲಾವಿದರು ಸೇರಿ ಕಲಾ ಸಮರ್ಪಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ಪೋಸ್ಟರ್ ಬಿಡುಗಡೆ ಗೊಳಿಸಿ ಮಾಹಿತಿ ನೀಡಿದ ರೋಟರಿ ಹೆರಿಟೇಜ್ ಮೈಸೂರು ಅಧ್ಯಕ್ಷರಾದ ವೆಂಕಟೇಶ್ ಎಚ್ ಎಂ ರೋಟರಿ ಹೆರಿಟೇಜ್ ಮೈಸೂರು ಮತ್ತು ಮೈಸೂರು ಆರ್ಟಿಸ್ಟ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗುತ್ತಿದೆ. ಕಲೆ ಬೆಳೆಯಬೇಕಾದರೆ ಕಲಾವಿದರು ಬೆಳೆಯಬೇಕು. ಇಂದಿನ ಕೋವಿಡ್ ಸಂದರ್ಭದ ಲಾಕ್ಡೌನ್ ನಿಂದಾಗಿ ಕಳೆದ 2ವರ್ಷಗಳಿಂದ ಸಾಂಸ್ಕೃತಿಕ ವೇದಿಕೆ ಪ್ರದರ್ಶನ ಕಾರ್ಯಕ್ರಮಗಳಿಲ್ಲದೆ ಕಲಾವಿದನ ಬದುಕಿಗೆ ಮತ್ತು ವೃತ್ತಿಪರವಾಗಿ ಕಲಾಕ್ಷೇತ್ರವನ್ನೆ ನಂಬಿರುವ ಸಾವಿರಾರು ಕಲಾವಿದರ ಕುಟುಂಬ ತೊಂದರೆಗೀಡಾಗಿದೆ. ಇಂತಹ ಕಲಾವಿದರುಗಳಿಗೆ ಆರ್ಥಿಕವಾಗಿ ಮತ್ತು ಮಾನಸಿಕ ಶಕ್ತಿಯನ್ನ ತುಂಬಲು ಕಲಾಸಮರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದರು.
ಮೈಸೂರಿನ ಕಲಾಮಂದಿರದಲ್ಲಿ 3ದಿನಗಳ ಕಾಲ ಜನಪ್ರಿಯ ಗಾಯಕರು ನೈಜ ಪಕವಾದ್ಯ ಕಲಾವಿದರಿಂದ ಶಾಸ್ತ್ರೀಯ, ಹಿಂದೂಸ್ಥಾನಿ, ದಾಸವಾಣಿ, ಸೆಕ್ಸಪೋನ್ ವಾದನ, ಜುಗಲ್ಬಂದಿ, ಪಂಚವೀಣೆ, ಮೃದಂಗತರಂಗ, ಭಾವಗೀತೆ, ಜನಪದಗೀತೆ ಸೇರಿದಂತೆ ಜನಪ್ರಿಯ ಚಿತ್ರಗೀತೆಗಳ ಕಲಾದಮರ್ಪಣೆ ಕಾರ್ಯಕ್ರಮ ನೆರವೇರಿದೆ ಇದರ ಚಿತ್ರೀಕರಣ ಸಂಪೂರ್ಣಗೊಂಡಿದ್ದು ಕೋವಿಡ್ ಸರ್ಕಾರ ನಿಯಮ ಅನುಸಾರವಾಗಿ ಸಾರ್ವಜನಿಕರು ವೀಕ್ಷಿಸಲು ಪ್ರವೇಶವಿರಲಿಲ್ಲ. ಇದನ್ನು ಆನ್ಲೈನ್ ಮುಖಾಂತರ ನಮ್ಮ ಮೈಸೂರು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗುವುದು.
ಮೈಸೂರಿನಲ್ಲಿ ನೂರಾರು ಕಲಾವಿದರು ತೊಂದರೆಯಲ್ಲಿದ್ದಾರೆ ಕಲಾಸಮರ್ಪಣೆ ಕಾರ್ಯಕ್ರಮ ಪ್ರಸಾರಣದಿಂದ ಬರುವ ದೇಣಿಗೆಯನ್ನು ಅವಶ್ಯಕವಿರುವ ಕಲಾವಿದರ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು, ನಾಡಿನ ಎಲ್ಲಾ ಕಲಾಪ್ರೋತ್ಸಾಹಕರು ಉದ್ಯಮಿಗಳು, ಸಂಘ ಸಂಸ್ಥೆಗಳು ಹೆಚ್ಚಿನ ಕಲಾನೆರವು ನೀಡಿ ಸಂಕಷ್ಟದಲ್ಲಿರುವ ನಮ್ಮ ಕಲಾವಿದರಿಗೆ ಕೊಂಚವಾದರೂ ನಿಮ್ಮ ಸಹಾಯ ಹಸ್ತವನ್ನು ಚಾಚಬೇಕೆಂದು ಕೇಳಿಕೊಳ್ಳುತ್ತೇವೆ ಎಂದರು.
ರೋಟರಿ ಹೆರಿಟೇಜ್ ಮೈಸೂರು ಖಾತೆಗೆ ಪೋನ್ ಪೇ ಗೂಗಲ್ ಪೇ ಮಾಡಬಹುದು, ಸಾರ್ವಜನಿಕರ ಹಾಗೂ ಎಲ್ಲಾ ಕಲಾ ಪೋಷಕರ ಒಂದು ಸಣ್ಣ ಸಹಾಯ ನೂರಾರು ಕಲಾವಿದರ ಆರ್ಥಿಕ ನೆರವಿಗೆ ಪುಷ್ಟಿಕೊಟ್ಟು ಈ ಕೋವಿಡ್ ಸಂದರ್ಭದಲ್ಲಿ ಜೀವನೋಪಾಯ ವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ ರಾಜೀವ್, ಸಂಸ್ಥಾಪನ ಅಧ್ಯಕ್ಷರಾದ ಮಂಜುನಾಥ್. ಕೆ , ರಾಘವೇಂದ್ರ ಡಿ ಎನ್, ಮೈಸೂರು ಆರ್ಟಿಸ್ಟ್ಸ್ ಅಸೋಸಿಯೇಷನ್ ರಘುನಾಥ್, ಗುರುದತ್, ಗಣೇಶ್ ಭಟ್, ಅಜಯ್ ಶಾಸ್ತ್ರಿ ಇದ್ದರು. (ಕೆ.ಎಸ್,ಎಸ್.ಎಚ್)