
ಮೈಸೂರು
ಪಾದಚಾರಿ ಮಾರ್ಗ ಅಡೆತಡೆ ತೆರವು : ನಗರ ಸಂಚಾರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ
ಮೈಸೂರು,ಜು.24:- ನಗರದ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರಸ್ಥರು ಪಾದಚಾರಿ ಮಾರ್ಗದಲ್ಲಿ ತಮ್ಮ ವ್ಯಾಪಾರದ ಸಾಮಾಗ್ರಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದು, ಇದರಿಂದ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಮೈಸೂರು ನಗರ ಸಂಚಾರ ಪೊಲೀಸರು ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿರುತ್ತಾರೆ.
ಸಂಚಾರ ಪೊಲೀಸರು ದೇವರಾಜ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಭಾ ಟಾಕೀಸ್ ರಸ್ತೆ, ಕೆ.ಆರ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವೇದಾಂತ ಹೆಮ್ಮಿಗೆ ರಸ್ತೆಯಿಂದ ರೈಲ್ವೇ ಅಂಡರ್ ಬ್ರಿಡ್ಜ್ ವರೆಗಿನ ರಸ್ತೆ, ನರಸಿಂಹರಾಜ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಬೀರ್ ರಸ್ತೆ. ವಿ.ವಿ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಆರ್.ಎಸ್ ಮುಖ್ಯ ರಸ್ತೆ ಇಲ್ಲಿ ಫುಟ್ಪಾತ್ ತೆರವು ಕಾರ್ಯದ ಸಮಯದಲ್ಲಿ ಫುಟ್ ಪಾತ್ ಆವರಿಸಿಕೊಂಡಿದ್ದ ವ್ಯಾಪಾರಸ್ಥರ ವಿರುದ್ದ ಕರ್ನಾಟಕ ಪೊಲೀಸ್ ಕಾಯ್ದೆಯ ಅಡಿಯಲ್ಲಿ 03 ಪ್ರಕರಣಗಳನ್ನು ದಾಖಲಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. 05 ಐಎಂವಿ ಪ್ರಕರಣಗಳನ್ನು ದಾಖಲಿಸಿ, 2500 ರೂ. ಸ್ಥಳ ದಂಡ ಸಂಗ್ರಹ ಮಾಡಿದ್ದು, 19 ಜನರಿಗೆ ನೋಟೀಸ್ಗಳನ್ನು ನೀಡಲಾಗಿದೆ.
ಫುಟ್ಪಾತ್ ತೆರವುಗೊಳಿಸುವ ಈ ಕಾರ್ಯಾಚರಣೆಯನ್ನು ನಗರದ ಸಂಚಾರ ವಿಭಾಗದ ಡಿ.ಸಿ.ಪಿ. ಗೀತಪ್ರಸನ್ನ ಹಾಗೂ ಸಂಚಾರ ವಿಭಾಗದ ಎ.ಸಿ.ಪಿ ಎಸ್.ಇ.ಗಂಗಾಧರಸ್ವಾಮಿ ಮಾರ್ಗದರ್ಶನದಲ್ಲಿ ಸಂಚಾರ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರುಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾಡಿರುತ್ತಾರೆ.
ಫುಟ್ಪಾತ್ ತೆರವುಗೊಳಿಸುವ ಈ ಕಾರ್ಯಾಚರಣೆಯು ಇದೇ ರೀತಿ ಮುಂದಿನ ದಿನಗಳಲ್ಲಿಯೂ ಮುಂದುವರೆಯಲಿದ್ದು, ಫುಟ್ ಪಾತ್ ಅತಿಕ್ರಮಣ ಮಾಡುವ ವ್ಯಾಪಾರಸ್ಥರ ವಿರುದ್ಧ ಕಾನೂನಿನ ರೀತ್ಯಾ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ ತಿಳಿಸಿರುತ್ತಾರೆ. (ಕೆ.ಎಸ್,ಎಸ್.ಎಚ್)