
ಮೈಸೂರು
ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯ ಯುವ ಪೀಳಿಗೆಯಿಂದ ನಡೆಯಬೇಕು : ಪ್ರೊ.ಎಂ.ವರದರಾಜು
ಕನ್ನಡಕ್ಕೆ ತನ್ನದೇ ಆದ ಶಾಸ್ತ್ರೀಯ ಸ್ಥಾನಮಾನವಿದ್ದು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸವಾಗಬೇಕು ಎಂದು ಮಹಾರಾಜ ಕಾಲೇಜಿನ ಹಿರಿಯ ವಿದ್ಯಾರ್ಥಿ, ಮಹಾರಾಣಿ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಎಂ.ವರದರಾಜು ತಿಳಿಸಿದರು.
ಮೈಸೂರಿನ ಮಹಾರಾಜ ಕಾಲೇಜಿನ ಜೂನಿಯರ್ ಬಿ.ಎ.ಹಾಲ್ ನಲ್ಲಿ ಶುಕ್ರವಾರ ಮೈಸೂರು ವಿಶ್ವವಿದ್ಯಾಲಯ ಕನ್ನಡ ವಿಭಾಗದ ವತಿಯಿಂದ ನಡೆದ 2016-17ನೇ ಸಾಲಿನ ಕನ್ನಡ ಸಂಘದ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಎಲ್ಲರೂ ಕನ್ನಡವನ್ನು ಕಲಿಯಬೇಕು. ಕನ್ನಡವನ್ನು ಕಲಿಸುವ ಕೆಲಸ ಪ್ರಾಥಮಿಕ ಹಂತದಲ್ಲಿಯೇ ನಡೆಯಬೇಕು ಎಂದು ತಿಳಿಸಿದರು. ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯತೆಯುಳ್ಳ ಭಾಷೆ ಇದಾಗಿದ್ದು, ಭಾರತದ ಪುರಾತನ ಭಾಷೆಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಆಡಳಿತ ಭಾಷೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗಿ ಮಕ್ಕಳಿಗೆ ಇಂಗ್ಲಿಷ್ ಬೋಧನೆ ಮಾಡಲಾಗುತ್ತದೆ. ಇಂಗ್ಲಿಷ್ ಕಲಿಯುವುದು ತಪ್ಪು ಅಂತ ಅಲ್ಲ. ವ್ಯಾವಹಾರಿಕವಾಗಿ ಇಂಗ್ಲಿಷ್ ಬೇಕು. ಆದರೆ ಕನ್ನಡವನ್ನು ತಿರಸ್ಕರಿಸಬಾರದು. ಅದನ್ನು ಉಳಿಸಿ, ಬೆಳೆಸುವ ಕಾರ್ಯ ಇಂದಿನ ಯುವ ಪೀಳಿಗೆಯಿಂದಲೇ ನಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಡಿ.ವಿಜಯಲಕ್ಷ್ಮಿ, ಕನ್ನಡ ಸಂಘದ ಸಂಚಾಲಕ ಡಾ.ಟಿ.ಕೆ.ಕೆಂಪೇಗೌಡ, ಆಡಳಿತಾಧಿಕಾರಿ ಡಾ.ಎಲ್.ಲಿಂಬ್ಯಾನಾಯ್ಕ್, ಪ್ರಾಂಶುಪಾಲೆ ಪ್ರೊ.ಸಿ.ಪಿ.ಸುನೀತ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)