ಮೈಸೂರು

ವಿಜಯ ವಿಠಲ ಕಾಲೇಜಿನಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮ

ಮೈಸೂರು,ಜು.24:- ವಿಜಯ ವಿಠಲ ಕಾಲೇಜಿನಲ್ಲಿ ಗುರುಪೂರ್ಣಿಮಾ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಪ್ರಾಂಶುಪಾಲರಾದ ಹೆಚ್. ಸತ್ಯಪ್ರಸಾದ್‍ ಅವರು ಮಾತನಾಡಿ ಗುರು ಪರಂಪರೆ ಅನಾದಿ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ದೀಪವನ್ನು ಬೆಳಗುವ ಕೆಲಸವನ್ನು ಗುರುಗಳು ಮಾಡುತ್ತಾರೆ. ವಿದ್ಯಾದಾನ ಮಾಡುವ ಗುರುಗಳು ಸರ್ವಶ್ರೇಷ್ಠರು. ಅನ್ನದಿಂದ ಕ್ಷಣಿಕ ತೃಪ್ತಿ ದೊರೆತರೆ ವಿದ್ಯಾ ದಾನದಿಂದ ಶಾಶ್ವತವಾದ ಕೀರ್ತಿ ಮತ್ತು ಸಾರ್ಥಕತೆ ದೊರೆಯುತ್ತದೆ. ವಿದ್ಯೆ ವಿನಯವನ್ನು ತಂದುಕೊಡಬೇಕು. ವಿನಯಶೀಲತೆಯಿಂದ ವಿದ್ಯೆ, ವಿದ್ಯೆಯಿಂದ ಹಣ ಮತ್ತು ಹಣದಿಂದ ಧರ್ಮವನ್ನು ಆಚರಿಸಿ, ಕ್ಷಣಕ್ಷಣವೂ ವಿದ್ಯಾರ್ಜನೆಯತ್ತ ವಿದ್ಯಾರ್ಥಿಗಳು ಶ್ರಮಿಸಬೇಕು. ತಂದೆ-ತಾಯಿ ಹಾಗೂ ಗುರುವನ್ನು ಗೌರವಿಸಿ ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗಬೇಕು. ಜೀವನದ ಗುರಿಯನ್ನು ತಲುಪಬೇಕಾದರೆ ಮಾನವ ಪ್ರಯತ್ನ, ದೈವತಾನುಗ್ರಹ, ಗುರುವಿನ ಆಶ್ರಯ ಇದ್ದಾಗ ಮಾತ್ರ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ವಿದ್ಯೆ ಹಾಗೂ ಗುರುವಿನ ಮಹತ್ವವನ್ನು ತಿಳಿಸಿದರು.
ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕಿಯಾದ ಮಯೂರಲಕ್ಷ್ಮಿ ಗುರುಪೂರ್ಣಿಮಾ ಮಹತ್ವವನ್ನು ತಿಳಿಸುತ್ತಾ ಶ್ರೇಷ್ಠವಾದ ಮಹಾಭಾರತ ಗ್ರಂಥವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ಕೃಷ್ಣ ದ್ವೈಪಾಯನ ಎಂದು ಪ್ರಸಿದ್ಧರಾದ ಭಗವಾನ್ ವೇದವ್ಯಾಸರು ಜನ್ಮ ತಳೆದು ಜಗತ್ತಿಗೆ ಮಹಾಭಾರತದಂಥ ಶ್ರೇಷ್ಠ ಗ್ರಂಥವನ್ನು ಕೊಡುಗೆಯಾಗಿ ನೀಡಿದರು. ಎಲ್ಲಾ ಸಾಧಕರಿಗೂ ಗುರುಗಳೇ ಪ್ರೇರಣೆ. ವಿದ್ಯಾರ್ಥಿಗಳು ಈ ದಿನದಂದು ತಮ್ಮ ಗುರುಗಳನ್ನು ಸ್ಮರಿಸಿ ಅವರಿಗೆ ನಮಿಸುವುದರ ಮೂಲಕ ಇನ್ನಷ್ಟು ಸಾಧನೆಯನ್ನು ಮಾಡಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ನಿರೂಪಿಸಿದ ಸಂಸ್ಕೃತ ಉಪನ್ಯಾಸಕರಾದ ಸಂಜಯ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗಾಗಿ ವಿದ್ಯೆ ಕಲಿಸುವ ಗುರುಗಳ ಪಾತ್ರ ಉತ್ತಮ ಗುರುಗಳ ಪಾತ್ರ ಮಹತ್ತರವಾಗಿದೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಗುರುವನ್ನು ನೆನೆದು ಗೌರವಿಸಿ ಜೀವನದಲ್ಲಿ ಪ್ರಗತಿಯ ಪಥದತ್ತ ಸಾಗಬಹುದು ಎಂದು ತಿಳಿಸುತ್ತಾ ಕೌಂಡಿನ್ಯ ಮಹರ್ಷಿಗಳ ಕಥೆಯನ್ನು ಹೇಳಿದರು.
ವಿದ್ಯಾರ್ಥಿಗಳು ಜೂಮ್ ಮೀಟಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: